ರೈಲ್ವೇ ನಿಲ್ದಾಣದ ಟಾಯ್ಲೆಟ್‌ಗಳ ಬಳಕೆ ಶುಲ್ಕ ಕಡಿತಕ್ಕೆ ಪ್ರಸ್ತಾಹ

Update: 2018-02-12 18:10 GMT

ಹೊಸದಿಲ್ಲಿ, ಫೆ.12: ರೈಲ್ವೇ ನಿಲ್ದಾಣಗಳಲ್ಲಿರುವ ಪಾವತಿಸಿ ಬಳಸುವ ಟಾಯ್ಲೆಟ್‌ಗಳ ಶುಲ್ಕವನ್ನು ಕಡಿಮೆಗೊಳಿಸುವಂತೆ ಹಾಗೂ ಕೆಲವು ಸಣ್ಣ ರೈಲು ನಿಲ್ದಾಣಗಳಲ್ಲಿ ಇವು ಸಂಪೂರ್ಣ ಉಚಿತವಾಗಿರಲು ಕ್ರಮ ಕೈಗೊಳ್ಳುವಂತೆ ರೈಲ್ವೇ ಮಂಡಳಿ ಪ್ರಸ್ತಾವನೆ ಸಲ್ಲಿಸಿದೆ.

   ಈಗ ಇವನ್ನು ಬಳಸುವಾಗ ಪಾವತಿಸಬೇಕಾದ ಶುಲ್ಕವನ್ನು ಟಾಯ್ಲೆಟ್‌ಗಳನ್ನು ನಿರ್ಮಿಸುವ ಗುತ್ತಿಗೆದಾರ ನಿರ್ಧರಿಸಲು ಅವಕಾಶವಿದೆ. ಹೊಸ ಯೋಜನೆಯ ಪ್ರಕಾರ, ಟಾಯ್ಲೆಟ್‌ಗಳಿಗೆ ಪಾವತಿಸಬೇಕಾದ ಶುಲ್ಕವನ್ನು, ಅಥವಾ ಉಚಿತವಾಗಿ ಬಳಸಲು ಅವಕಾಶ ನೀಡುವ ಕುರಿತು ರೈಲ್ವೇಯ ಡಿವಿಷನಲ್ ಮ್ಯಾನೇಜರ್ ತೀರ್ಮಾನಿಸುತ್ತಾರೆ ಎಂದು ಫೆ.7ರಂದು ರೈಲ್ವೇ ಮಂಡಳಿ ಎಲ್ಲಾ ವಲಯ ಕಚೇರಿಗಳಿಗೂ ಪತ್ರ ಬರೆದಿದೆ.

  ಸ್ವಚ್ಛ ಭಾರತ ಅಭಿಯಾನಕ್ಕೆ ಅಗತ್ಯವಿರುವಷ್ಟು ಟಾಯ್ಲೆಟ್‌ಗಳು ರಚನೆಯಾಗಿಲ್ಲ ಹಾಗೂ ಕೆಲವು ಸಣ್ಣ ರೈಲು ನಿಲ್ದಾಣಗಳಲ್ಲಿ ಜನರು ಪಾವತಿಸಿ ಬಳಸುವ ಟಾಯ್ಲೆಟ್‌ಗಳ ಸೇವೆ ಪಡೆಯಲು ಮುಂದಾಗದೆ ಬಯಲು ಶೌಚವನ್ನು ಅವಲಂಬಿಸಿದ್ದಾರೆ. ಆದ್ದರಿಂದ ಹೊಸ ಯೋಜನೆಯನ್ನು ಪ್ರಸ್ತಾವಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಪಾವತಿಸಿ ಬಳಸುವ ವ್ಯವಸ್ಥೆ ವಾಣಿಜ್ಯಿಕವಾಗಿ ಕಾರ್ಯಸಾಧ್ಯವೇ ಎಂಬುದನ್ನು ಡಿವಿಷನಲ್ ಮ್ಯಾನೇಜರ್ ತೀರ್ಮಾನಿಸುತ್ತಾರೆ. ಅಲ್ಲದೆ ಸ್ವಚ್ಛ ಭಾರತ ಅಭಿಯಾನದಡಿ ತಮ್ಮ ಪ್ರದೇಶದಲ್ಲಿ ನಿರ್ಮಿಸಬೇಕಿರುವ ಟಾಯ್ಲೆಟ್‌ಗಳೆಷ್ಟು ಎಂಬುದನ್ನೂ ಇವರು ನಿರ್ಧರಿಸಬೇಕು. ಇವನ್ನು ಕಡಿಮೆ ವೆಚ್ಚದಲ್ಲಿ ಅಥವಾ ಸಂಪೂರ್ಣ ಉಚಿತವಾಗಿ ಸರಕಾರೇತರ ಸಂಸ್ಥೆಗಳ ಅಥವಾ ಸ್ವಸಹಾಯ ಸಂಘಗಳ ಮೂಲಕ ನಿರ್ಮಿಸಬಹುದು. ಈ ನಿಟ್ಟಿನಲ್ಲಿ ಡಿವಿಷನಲ್ ಮ್ಯಾನೇಜರ್ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪಾವತಿಸಿ ಬಳಸುವ ಶೌಚಾಲಯದ ದರಪಟ್ಟಿ ಆಯಾ ಪ್ರದೇಶವನ್ನು ಅವಲಂಬಿಸಿರುತ್ತದೆ. 2012ರ ಮಾರ್ಗದರ್ಶಿ ಸೂತ್ರದ ಪ್ರಕಾರ ಶೌಚಗೃಹ ಬಳಸಿದರೆ 2 ರೂ. ಶುಲ್ಕ, ಮೂತ್ರ ಮಾಡಿದರೆ ಶುಲ್ಕವಿಲ್ಲ, ಬಾತ್‌ರೂಂ ಉಪಯೋಗಿಸಿದರೆ 5 ರೂ. ಶುಲ್ಕ ವಿಧಿಸಲಾಗುತ್ತದೆ.

ಆದರೆ ಬಹುತೇಕ ರೈಲ್ವೇ ನಿಲ್ದಾಣಗಳ ಟಾಯ್ಲೆಟ್‌ಗಳಲ್ಲಿ ಮೂತ್ರ ಮಾಡಿದರೆ 2 ರೂ, ಸ್ನಾನಕ್ಕೆ 15ರೂ.ನಿಂದ 20 ರೂ. ಶುಲ್ಕ ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News