​ಮದ್ದೂರು: ಇಂದಿರಾ ಕ್ಯಾಂಟೀನ್ ಗೆ ಪುರಸಭೆಯ ವಿಶೇಷ ಸಭೆಯಲ್ಲಿ ಅನುಮೋದನೆ

Update: 2018-02-12 18:14 GMT

ಮದ್ದೂರು, ಫೆ.12: ಉದ್ದೇಶಿತ ಸ್ಥಳ ಅಥವಾ ಪಟ್ಟಣದ ಹಳೇ ಬಸ್‍ನಿಲ್ದಾಣದ ಆವರಣದಲ್ಲಿರುವ ಪುರಸಭೆಗೆ ಸೇರಿದ ಜಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲು ಸೋಮವಾರ ನಡೆದ ಪುರಸಭೆಯ ವಿಶೇಷ ಸಭೆಯು ಅನುಮೋದನೆ ನೀಡಿತು. 

ಅಧ್ಯಕ್ಷೆ ಲತಾ ಬಸವರಾಜು ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಳ್ಳುತ್ತಿದ್ದಂತೆ ಮುಖ್ಯಾಧಿಕಾರಿ ಕುಮಾರ್, ಪುರಸಭೆ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು ಸರಕಾರ ನಿರ್ದೇಶನ ನೀಡಿರುವುದನ್ನು ಪ್ರಸ್ತಾಪಿಸಿದರು. ತೋಟಗಾರಿಕೆ ಇಲಾಖೆಯ ಸಸ್ಯಗಾರದಲ್ಲಿ ಕ್ಯಾಂಟಿನ್ ತೆರೆಯಲು ತೋಟಗಾರಿಕೆ ಇಲಾಖೆ ಆಯುಕ್ತರು ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿದ್ದಾರೆ. ಆದ್ದರಿಂದ ಪಟ್ಟಣದ ಜನನಿಬಿಡ ಸ್ಥಳದಲ್ಲಿ ಕ್ಯಾಂಟೀನ್ ತೆರೆಯಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.

ಈ ಕುರಿತು ಹಲವು ಸುತ್ತಿನ ಮಾತುಕತೆ ನಡೆಸಿದ ಸದಸ್ಯರು, ತೋಟಗಾರಿಕೆ ಇಲಾಖೆ ಆವರಣದಲ್ಲಿಯೇ ಕ್ಯಾಂಟಿನ್ ತೆರೆಯಲು ಮತ್ತೊಮ್ಮೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಸೂಚಿಸಿದರು. ಒಂದು ವೇಳೆಜಿಲ್ಲಾಧಿಕಾರಿಗಳು ನಿರಾಕರಿಸಿದರೆ ಅಂತಿಮವಾಗಿ ಹಳೇ ಬಸ್‍ನಿಲ್ದಾಣದ ಆವರಣದಲ್ಲಿ ಕ್ಯಾಂಟಿನ್ ತೆರೆಯವಂತೆ ಸಲಹೆ ನೀಡಿದರು. 2018-19ನೆ ಸಾಲಿನ ಪಟ್ಟಣದ ವಾರದ ಸಂತೆ, ನೆಲ ಬಾಡಿಗೆ, ಖಾಸಗಿ ವಾಹನಗಳ ಸುಂಕ ವಸೂಲಾತಿ ಕುರಿತು ಬಹಿರಂಗ ಹರಾಜು ಪ್ರಕ್ರಿಯೆ ನಡೆಸುವ ಕುರಿತು ಮತ್ತು ಇತರೆ ಹಲವು ವಿಷಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಉಪಾಧ್ಯಕ್ಷೆ ನಾಗರತ್ನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್, ಸದಸ್ಯರಾದ ಮಂಜುಳ ಮೃತ್ಯುಂಜಯ, ವಿಜಯ ಮಲ್ಲಿಕಾರ್ಜುನ್, ರಘು, ಶೇಖರ್, ಶಿವಣ್ಣ, ಉಮೇಶ್, ಇತರರು ಸಭೆಯಲ್ಲಿ ಭಾಗವಹಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News