ಪ್ರತಿ ವರ್ಷ ಕಾಡ್ಗಿಚ್ಚುಗಳಿಂದ ಅಂದಾಜು 550 ಕೋಟಿ ರೂ. ನಷ್ಟ!

Update: 2018-02-13 14:47 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಫೆ.13: ಕಾಡ್ಗಿಚ್ಚುಗಳ ಬೆದರಿಕೆಯನ್ನು ಗಮನಕ್ಕೆ ತೆಗೆದುಕೊಂಡಿರುವ ಸರಕಾರವು ಇದೇ ಮೊದಲ ಬಾರಿಗೆ 2017ನೇ ಸಾಲಿನ ಅರಣ್ಯಗಳ ಸ್ಥಿತಿ ಕುರಿತು ವರದಿಯಲ್ಲಿ ಕಾಡ್ಗಿಚ್ಚುಗಳ ಕುರಿತು ಸಂಪೂರ್ಣ ದತ್ತಾಂಶಗಳನ್ನು ಪ್ರಕಟಿಸಿದೆ.

2003-2016ರ ನಡುವಿನ 13 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಉಂಟಾದ ಕಾಡ್ಗಿಚ್ಚುಗಳ ಸಂಖ್ಯೆಯಲ್ಲಿ ಸುಮಾರು ಶೇ.38ರಷ್ಟು ಏರಿಕೆಯಾಗಿ ವಾರ್ಷಿಕ ಸರಾಸರಿ 24,550ರಿಂದ 33,664ಕ್ಕೆ ತಲುಪಿದೆ.

ಶೇ.95ಕ್ಕೂ ಹೆಚ್ಚಿನ ಕಾಡ್ಗಿಚ್ಚುಗಳಿಗೆ ಮಾನವರೇ ಕಾರಣರಾಗಿದ್ದಾರೆ ಎಂದು ಅರಣ್ಯಗಳ ಮಹಾ ನಿರ್ದೇಶಕ ಸಿದ್ಧಾಂತ ದಾಸ್ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಿಳಿಸಿದರು.

ತಾಪಮಾನ ಏರಿಕೆಯಿಂದಾಗಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಮಣ್ಣಿಗೆ ಸಾಧ್ಯವಾಗುತ್ತಿಲ್ಲವಾದ್ದರಿಂದ ಕಾಡ್ಗಿಚ್ಚುಗಳ ಬೆದರಿಕೆ ಹೆಚ್ಚುತ್ತಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಘಟನೆಗಳ ಸಂಖ್ಯೆ ಕಾಡಿಚ್ಚುಗಳು ಹೆಚ್ಚುತ್ತಿರುವ ಪ್ರವೃತ್ತಿಯನ್ನು ಸೂಚಿಸುತ್ತಿದೆ ಯಾದರೂ, ದತ್ತಾಂಶಗಳು ವಾರ್ಷಿಕ ಏರಿಕೆಯನ್ನೂ ಒಳಗೊಂಡಿವೆ. 2009ರಲ್ಲಿ ಅತಿ ಹೆಚ್ಚು (46,152) ಕಾಡ್ಗಿಚ್ಚು ಘಟನೆಗಳು ಸಂಭವಿಸಿದ್ದವು.

 ಕಾಡ್ಗಿಚ್ಚುಗಳನ್ನು ವರದಿ ಮಾಡಲು ನಾವೀಗ ಹೆಚ್ಚು ಆಧುನಿಕ ಪದ್ಧತಿಗಳನ್ನು ಬಳಸುತ್ತಿದ್ದೇವೆ ಎಂದು ಭಾರತೀಯ ಅರಣ್ಯ ಸರ್ವೇಕ್ಷಣೆಯ ಹಿರಿಯ ಅಧಿಕಾರಿ ರಾಜೇಶ್ ಕುಮಾರ್ ತಿಳಿಸಿದರು.

ಕಾಡ್ಗಿಚ್ಚುಗಳು ಭಾರೀ ಪ್ರಮಾಣದಲ್ಲಿ ಅಂಗಾರಾಮ್ಲ ವಾಯುವನ್ನೂ ಬಿಡುಗಡೆ ಗೊಳಿಸುತ್ತಿದ್ದು, ಇದು ಭಾರತದ ಹಸಿರು ಮನೆ ಅನಿಲ ಸೂಸುವಿಕೆ ಗುರಿ ಸಾಧನೆಗೂ ಬೆದರಿಕೆ ಒಡ್ಡುತ್ತಿದೆ.

ಅರಣ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಸಂಗ್ರಹ ಹೊಂದಿರುವಂತಾಗಲು ಅವುಗಳ ಗುಣಮಟ್ಟದಲ್ಲಿ ಸುಧಾರಣೆಯಾಗಬೇಕಿದೆ. ನಾವೀಗ ಅದನ್ನು ಮಾಡುತ್ತಿರುವ ವೇಗದಿಂದ ಪ್ಯಾರಿಸ್ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ. ಹವಾಮಾನ ಬದಲಾವಣೆಗೂ ಕಾಡ್ಗಿಚ್ಚುಗಳಿಗೂ ಸಂಬಂಧವಿದೆ. ಅರಣ್ಯವು ಒಣಗಿದಷ್ಟೂ ಅದು ಕಾಡ್ಗಿಚ್ಚಿಗೆ ಗುರಿಯಾ ಗುವ ಸಾಧ್ಯತೆ ಹೆಚ್ಚು ಎಂದು ದಾಸ್ ಹೇಳಿದರು.

ದೇಶದಲ್ಲಿ ಅತ್ಯಂತ ಹೆಚ್ಚಿನ ಕಾಡ್ಗಿಚ್ಚು ಪ್ರಕರಣಗಳು ಈಶಾನ್ಯ ರಾಜ್ಯಗಳಿಂದ ವರದಿಯಾಗಿವೆ ಎಂದು ಪರಿಸರ ಸಚಿವಾಲಯದ ಕಾರ್ಯದರ್ಶಿ ಸಿ.ಕೆ ಮಿಶ್ರಾ ತಿಳಿಸಿದರು.

ಕಾಡ್ಗಿಚ್ಚುಗಳಿಂದ ಭಾರತವು ಪ್ರತಿ ವರ್ಷ 550 ಕೋ.ರೂ.ಗಳ ನಷ್ಟವನ್ನು ಅನುಭವಿಸುತ್ತಿದೆ ಎಂದು ಸಚಿವಾಲಯವು ಅಂದಾಜಿಸಿದೆ. ದತ್ತಾಂಶಗಳ ಮೇರೆಗೆ ದಟ್ಟ ಅರಣ್ಯಗಳು ಕಾಡ್ಗಿಚ್ಚುಗಳಿಗೆ ಸುಲಭವಾಗಿ ಬಲಿಯಾಗುತ್ತಿವೆ. ಕಾಡ್ಗಿಚ್ಚುಗಳ ತಡೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ನೀತಿಯೊಂದನ್ನು ಮೂರು ತಿಂಗಳಲ್ಲಿ ರೂಪಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಕಳೆದ ವರ್ಷದ ಆಗಸ್ಟ್‌ನಲ್ಲಿಯೇ ಸಚಿವಾಲಯಕ್ಕೆ ಸೂಚಿಸಿತ್ತಾದರೂ ಅಂತಹ ನೀತಿಯೊಂದನ್ನು ಈವರೆಗೆ ರೂಪಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News