ಅಧಿಕಾರಕ್ಕೆ ಬಂದರೆ ಜಿಎಸ್‌ಟಿಯ ಸರಳೀಕರಣ:ರಾಹುಲ್ ಗಾಂಧಿ

Update: 2018-02-13 15:14 GMT

ಕಲಬುರಗಿ,ಫೆ.13: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಅದು ಏಕಹಂತದ ತೆರಿಗೆ ಮತ್ತು ಸೂಕ್ತ ಮಟ್ಟದಲ್ಲಿ ತೆರಿಗೆ ಮಿತಿಯನ್ನು ನಿಗದಿಗೊಳಿಸಲು ಪ್ರಯತ್ನಿಸುವ ಮೂಲಕ ಈಗಿನ ಜಿಎಸ್‌ಟಿ ವ್ಯವಸ್ಥೆಯನ್ನು ಸರಳಗೊಳಿಸಲಿದೆ ಎಂದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಇಲ್ಲಿ ತಿಳಿಸಿದರು.

ತನ್ನ ನಾಲ್ಕು ದಿನಗಳ ಉತ್ತರ ಕರ್ನಾಟಕ ಪ್ರವಾಸದ ಕೊನೆಯ ದಿನ ಇಲ್ಲಿ ವೃತ್ತಿಪರರು ಮತ್ತು ಉದ್ಯಮಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಜಿಎಸ್‌ಟಿಗೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ‘ಭಾರೀ’ ಗೊಂದಲವನ್ನೂ ನಿವಾರಿಸಲಾ ಗುವುದು ಎಂದರು.

ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ. ನಾವು ಅಧಿಕಾರಕ್ಕೆ ಬಂದಾಗ ಈಗಿನ ಜಿಎಸ್‌ಟಿಯಲ್ಲಿ ಸುಧಾರಣೆ ತರುತ್ತೇವೆ ಮತ್ತು ಅದನ್ನು ಸರಳಗೊಳಿಸುತ್ತೇವೆ ಎಂದ ಅವರು, ಕಾಂಗ್ರೆಸ್ ಜನರ ಬದುಕನ್ನು ಸರಳಗೊಳಿಸುವ ಜಿಎಸ್‌ಟಿ ಪರಿಕಲ್ಪನೆಯನ್ನು ಹೊಂದಿತ್ತು. ಆದರೆ ಅದೀಗ ಜಟಿಲವಾಗಿದೆ ಎಂದರು.

ಒಂದೇ ತೆರಿಗೆಯನ್ನು ಹೊಂದುವ ಹಾಗೂ ಬಡವರು ಮತ್ತು ಸಾಮಾನ್ಯ ಜನರು ಬಳಸುವ ಸರಕುಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸಲು ನಾವು ಉದ್ದೇಶಿಸಿದ್ದೆವು. ಏಕಹಂತದ ತೆರಿಗೆಯನ್ನು ಶೇ.18ಕ್ಕೆ ಸೀಮಿತಗೊಳಿಸುವುದು ನಮ್ಮ ಜಿಎಸ್‌ಟಿಯಾಗಿತ್ತು ಎಂದು ಅವರು ಹೇಳಿದರು.

ಐದು ತೆರಿಗೆ ಹಂತಗಳ ಜಿಎಸ್‌ಟಿಯನ್ನು ಹೇರದಂತೆ ಮತ್ತು ಅದನ್ನು ಜಾರಿಗೊಳಿಸುವ ಮುನ್ನ ಪ್ರಾಯೋಗಿಕ ಪರೀಕ್ಷೆಗೊಳಪಡಿಸುವಂತೆ, ಇಲ್ಲದಿದ್ದರೆ ಅದು ‘ದುರಂತ’ವಾಗಲಿದೆ ಎಂದು ಕಾಂಗ್ರೆಸ್ ಸರಕಾರಕ್ಕೆ ಸೂಚಿಸುತ್ತಲೇ ಇತ್ತು. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಈ ಪ್ರಸ್ತಾವದೊಡನೆ ವಿತ್ತಸಚಿವ ಅರುಣ್ ಜೇಟ್ಲಿಯವರನ್ನು ಸಹ ಭೇಟಿ ಮಾಡಿದ್ದರು ಎಂದು ರಾಹುಲ್ ತಿಳಿಸಿದರು.

ಜಿಎಸ್‌ಟಿಗೆ ಸಂಬಂಧಿಸಿದ ಸಮಸ್ಯೆಗಳ ವಿವರಗಳನ್ನು ನೀಡಿದರೆ ತಾನು ಅವುಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ಅವರು ವೃತ್ತಿಪರರಿಗೆ ಮತ್ತು ಉದ್ಯಮಿಗಳಿಗೆ 1ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News