ದುಷ್ಕರ್ಮಿಗಳಿಂದ ಹತ್ಯೆಗೀಡಾದ ಜುನೈದ್ ಖಾನ್ ತಾಯಿಗೆ ನಗದು ಹಸ್ತಾಂತರ

Update: 2018-02-13 15:58 GMT

ಹೊಸದಿಲ್ಲಿ, ಫೆ. 13: ಮಲಯಾಳಂನ ಖ್ಯಾತ ಲೇಖಕ ಕೆ.ಪಿ. ರಾಮನ್ ಉಣ್ಣಿ ತನ್ನ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯ ನಗದನ್ನು ಬೀಪ್ ಕೊಂಡೊಯ್ದ ಆರೋಪದಲ್ಲಿ ಹತ್ಯೆಯಾದ ಯುವಕ ಹಾಫಿಜ್ ಜುನೈದ್ ಖಾನ್ ತಾಯಿ ಸಾಯಿರಾ ಬೇಗಂ ಅವರಿಗೆ ಹಸ್ತಾಂತರಿಸಿದ್ದಾರೆ.

   ಹೊಸದಿಲ್ಲಿಯಲ್ಲಿ ಮಂಗಳವಾರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ರಾಮನ್ ಉಣ್ಣಿ ತನ್ನ ಹಣವನ್ನು ಜುನೈದ್ ಅವರ ತಾಯಿ ಸಾಯಿರಾ ಬೇಗಂಗೆ ಹಸ್ತಾಂತರಿಸಿದರು. ಪ್ರಶಸ್ತಿಯ 1 ಲಕ್ಷ ರೂಪಾಯಿಯಲ್ಲಿ 3 ರೂಪಾಯಿಯನ್ನು ತೆಗೆದಿರಿಸಿ ಉಳಿದ ಹಣವನ್ನು ಸಾಯಿರಾ ಬೇಗಂ ಹಸ್ತಾಂತರಿಸಿದರು.

 ಧಾರ್ಮಿಕ ಮೂಲಭೂತವಾದದ ವಿರುದ್ಧ ಧ್ವನಿ ಎತ್ತುತ್ತಿರುವ ಕೆ.ಪಿ. ರಾಮನ್ ಉಣ್ಣಿ ಹಿಂದೂ ಮುಸ್ಲಿಂ ನಡುವೆ ಸಾಮರಸ್ಯದ ಬಗ್ಗೆ ಹೇಳುವ ‘ಗಾಡ್ಸ್ ಓವ್ನ್ ಬುಕ್’ಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

‘‘ಕೇವಲ ಮುಸ್ಲಿಂ ಅನ್ನುವ ಕಾರಣಕ್ಕೆ ಹಿಂದೂ ಕೋಮವಾದಿ ಶಕ್ತಿಗೆ ಸೇರಿದ ಕೆಲವರು ಜುನೈದ್ ಅನ್ನು ಹತ್ಯೆಗೈದಿದ್ದಾರೆ. ಆ ಪಾಪದ ಪ್ರಾಯಶ್ಚಿತಕ್ಕಾಗಿ ಈ ಪ್ರಶಸ್ತಿಯ ಮೊತ್ತವನ್ನು ನಾನು ಜುನೈದ್ ಅವರ ತಾಯಿ ಸಾಯಿರಾ ಬೇಗಂ ಅವರ ಪಾದಕ್ಕೆ ಸಲ್ಲಿಸುತ್ತೇನೆ. ಏಕೆಂದರೆ ಪ್ರಾಯಶ್ಚಿತ ನಿಜವಾದ ಹಿಂದೂ ಸಂಪ್ರದಾಯದ ವಿಶೇಷ ಆಚರಣೆಯಾಗಿದೆ’’ ಎಂದು ರಾಮನ್ ಉಣ್ಣಿ ಹೇಳಿದ್ದಾರೆ.

 ಕಳೆದ ವರ್ಷ ಹರ್ಯಾಣದಲ್ಲಿ ಲೋಕಲ್ ಟೈನ್‌ನಲ್ಲಿ ಪ್ರಯಾಣಿಸುತ್ತಿದ್ದ ಜುನೈದ್ ಹಾಗೂ ಆತನ ಸಂಬಂಧಿಕರು ಬೀಫ್ ಕೊಂಡೊಯ್ಯುತ್ತಿದ್ದಾರೆ ಎಂದು ಆರೋಪಿಸಿ ಜುನೈದ್‌ನನ್ನು ಇರಿದು ಹತ್ಯೆಗೈಯಲಾಗಿತ್ತು. ದಿಲ್ಲಿಯಿಂದ ಮಥುರಾಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಹರ್ಯಾಣದ ಬಲ್ಲಾಬ್‌ಗಢದಲ್ಲಿ 16 ವರ್ಷದ ಜುನೈದ್‌ಗೆ ಹಲವು ಬಾರಿ ಇರಿಯಲಾಗಿತ್ತು.

62 ಹರೆಯದ ಕೆ.ಪಿ. ರಾಮನ್ ಉಣ್ಣಿ ಅವರ ‘ಸೂಫಿ ಪರಞ ಕತಾ’ 1995ರ ಕೇರಳ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಪಾತ್ರವಾಗಿತ್ತು. ‘ಜೀವಿದತ್ತಿಂಡೆ ಪುಸ್ತಗಂ’ 2011ರ ವಲಯಲಾರ್ ಪ್ರಶಸ್ತಿಗೆ ಬಾಜನವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News