ಮುಕೇಶ್ ಅಂಬಾನಿ ಸಂಪತ್ತಿನಿಂದ ಭಾರತ ಸರ್ಕಾರವನ್ನು ಎಷ್ಟು ದಿನಗಳು ನಡೆಸಬಹುದು ಗೊತ್ತಾ?

Update: 2018-02-13 16:25 GMT

ಹೊಸದಿಲ್ಲಿ, ಫೆ.13: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಬಳಿಯಿರುವ ಸಂಪತ್ತಿನಿಂದ ದೇಶದ ಸರಕಾರವನ್ನು ಎಷ್ಟು ದಿನಗಳ ಕಾಲ ನಡೆಸಬಹುದು?. ಇಂಥ ಒಂದು ಪ್ರಶ್ನೆಗೆ ಉತ್ತರ ತಿಳಿಯುವ ಪ್ರಯತ್ನದಲ್ಲಿ ಬ್ಲೂಮ್‌ಬರ್ಗ್ ಎಂಬ ಸಂಸ್ಥೆ ವಿಶಿಷ್ಟ ಸೂಚ್ಯಂಕವೊಂದನ್ನು ರಚಿಸಿದ್ದು, ಅದರಲ್ಲಿ ಆಯಾಯ ದೇಶಗಳ ಅತ್ಯಂತ ಶ್ರೀಮಂತ ವ್ಯಕ್ತಿಯ ಸಂಪತ್ತಿನಿಂದ ಆ ದೇಶದ ಸರಕಾರ ಎಷ್ಟು ದಿನ ಕಾರ್ಯಾಚರಿಸಬಹುದು ಎಂಬುದನ್ನು ತಿಳಿಯುವ ಪ್ರಯತ್ನ ಮಾಡಲಾಗಿದೆ. ಇದಕ್ಕೆ ಬ್ಲೂಮ್‌ಬರ್ಗ್, ‘ರಾಬಿನ್ ಹುಡ್ ಸೂಚಿ’ ಎಂದು ನಾಮಕರಣ ಮಾಡಿದೆ. ಈ ಸೂಚಿಯಲ್ಲಿ ವಿವಿಧ ರಾಜಕೀಯ ಹಿನ್ನೆಲೆಯುಳ್ಳ, ವಿವಿಧ ರೀತಿಯ ವೆಚ್ಚಗಳುಳ್ಳ 49 ದೇಶಗಳನ್ನು ಹೆಸರಿಸಲಾಗಿದ್ದು ಆಯಾ ದೇಶಗಳ ಅತ್ಯಂತ ಶ್ರೀಮಂತ ವ್ಯಕ್ತಿಯ ಹೆಸರನ್ನೂ ತಿಳಿಸಲಾಗಿದೆ. ಈ ಶ್ರೀಮಂತ ವ್ಯಕ್ತಿಗಳ 2017ರ ಡಿಸೆಂಬರ್ ವರೆಗಿನ ಒಟ್ಟಾರೆ ಸಂಪತ್ತನ್ನು ಸರಕಾರದ ದೈನಂದಿನ ಖರ್ಚಿನ ಜೊತೆ ಹೋಲಿಕೆ ಮಾಡಲಾಗಿದೆ. ಈ 49 ದೇಶಗಳ ಪೈಕಿ ಕೇವಲ ನಾಲ್ಕು ದೇಶಗಳಲ್ಲಿ ಮಹಿಳೆಯರು ಅತ್ಯಂತ ಶ್ರೀಮಂತರಾಗಿದ್ದಾರೆ. ಅವುಗಳೆಂದರೆ ಅಂಗೋಲಾ, ಆಸ್ಟ್ರೇಲಿಯ, ಚಿಲಿ ಮತ್ತು ನೆದರ್ಲ್ಯಾಂಡ್ಸ್.

ಒಂದು ವೇಳೆ ಆಯಾ ದೇಶದ ಸರಕಾರಗಳು ಸಂಪನ್ಮೂಲ ಕೊರತೆಯಿಂದ ಸ್ಥಗಿತಗೊಳ್ಳುವ ಹಂತಕ್ಕೆ ಬಂದರೆ ಆ ದೇಶದ ಶ್ರೀಮಂತ ವ್ಯಕ್ತಿ ಬಳಿಯಿರುವ ಸಂಪತ್ತಿನ ಸಹಾಯದಿಂದ ಎಷ್ಟು ದಿನಗಳ ಕಾಲ ಸರಕಾರವನ್ನು ನಡೆಸಬಹುದು ಎಂದು ಈ ಸೂಚಿಯಲ್ಲಿ ವಿವರಿಸಲಾಗಿದೆ.

ಸಿಪ್ರಸ್‌ನ ಅತ್ಯಂತ ಶ್ರೀಮಂತ ವ್ಯಕ್ತಿ ಜಾನ್ ಫ್ರೆಡ್ರಿಕ್ಸನ್ ಬಳಿಯಿರುವ ಸಂಪತ್ತಿನಿಂದ ಅವರ ದೇಶದ ಸರಕಾರವನ್ನು 441 ದಿನಗಳ ಕಾಲ ನಡೆಸಬಹುದಾಗಿದೆ. 2018ರ ವೇಳೆಗೆ 23.6 ಮಿಲಿಯನ್ ಡಾಲರ್ ಖರ್ಚಿನ ಅಂದಾಜು ಹೊಂದಿರುವ ಸಿಪ್ರಸ್‌ನ ಜನಸಂಖ್ಯೆ ಬಹಳ ಕಡಿಮೆಯಾಗಿದೆ. ಹಾಗಾಗಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ದೇಶವು ಜಾನ್‌ನ 10 ಬಿಲಿಯನ್ ಡಾಲರ್ ನೆರವಿನಿಂದ ಬಹಳ ದೀರ್ಘ ಕಾಲ ಕಾರ್ಯಾಚರಿಸಬಹುದಾಗಿದೆ. ಇದಕ್ಕೆ ಹೋಲಿಸಿದರೆ ಜಪಾನ್, ಪೋಲ್ಯಾಂಡ್, ಅಮೆರಿಕ ಮತ್ತು ಭಾರತದಲ್ಲಿ ಅತ್ಯಂತ ದುಬಾರಿ ಸರಕಾರಗಳಿವೆ ಎಂದು ಸೂಚಿ ತಿಳಿಸುತ್ತದೆ. 2017ರ ಡಿಸೆಂಬರ್ ಅಂತ್ಯದ ವೇಳೆಗೆ 40.3 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದ ಭಾರತ ಅಗ್ರಮಾನ್ಯ ಶ್ರೀಮಂತ ಮುಕೇಶ್ ಅಂಬಾನಿ ಸಂಪತ್ತಿನಿಂದ ನಮ್ಮ ದೇಶದ ಸರಕಾರವನ್ನು 20 ದಿನಗಳ ಕಾಲ ನಡೆಸಬಹುದಾಗಿದೆ.

ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿರುವ ಚೀನಾದ ಅತ್ಯಂತ ಶ್ರೀಮಂತ ವ್ಯಕ್ತಿ ಜಾಕ್ ಮಾ ತನ್ನ ದೇಶದ ಸರಕಾರವನ್ನು ಕೇವಲ ನಾಲ್ಕು ದಿನಗಳ ಕಾಲ ಮಾತ್ರ ಉಳಿಸಬಹುದಾಗಿದೆ.

ರಾಬಿನ್ ಹುಡ್ ಸೂಚಿಯಲ್ಲಿ ಅತ್ಯಂತ ಹೆಚ್ಚು ವ್ಯಯಿಸುವ ಸರಕಾರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ಅಮೆರಿಕ ಸರಕಾರವನ್ನು ಯುಎಸ್‌ನ ಅತ್ಯಂತ ಶ್ರೀಮಂತ ವ್ಯಕ್ತಿ ಜೆಫ್ ಬೆರೊಸ್ ತನ್ನ ಸಂಪತ್ತಿನ ಬಲದಿಂದ ಕೇವಲ ಐದು ದಿನಗಳ ಕಾಲ ಉಳಿಸಬಹುದು. ಇನ್ನು ಬ್ರಿಟನ್‌ನ ಹ್ಯೂ ಗ್ರಾಸ್ವೆನೊರ್ ಮತ್ತು ಜರ್ಮನಿಯ ಡೈಟರ್ ಶ್ವಾರ್ಝ್ ಕೂಡಾ ಐದು ದಿನಗಳ ಕಾಲ ತಮ್ಮ ಸರಕಾರಕ್ಕೆ ನೆರವು ನೀಡಬಹುದಾಗಿದೆ ಎಂದು ಸೂಚಿ ತಿಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News