ರಾಜಕೀಯವಾಗಿ ನಾನು ಪ್ರಭಾವಿಯಾಗಿರುವುದು ದಲಿತರಿಂದ: ವೈ.ಎನ್ ರುದ್ರೇಶ್ ಗೌಡ

Update: 2018-02-13 17:26 GMT

ಬೇಲೂರು,ಫೆ.13: ರಾಜಕೀಯವಾಗಿ ನಾನು ಪ್ರಭಾವಿಯಾಗಲು ದಲಿತರು ಪ್ರಮುಖ ಕಾರಣವಾಗಿದ್ದು, ನಾನು ಸ್ಪರ್ಧೆ ಮಾಡಿದಂತಹ ಪ್ರತಿಯೊಂದು ಚುನಾವಣೆಯಲ್ಲೂ ನನ್ನನ್ನು ಆಶೀರ್ವದಿಸುವಲ್ಲಿ ದಲಿತರು ಪ್ರಮುಖ ಪಾತ್ರ ವಹಿಸಿದ್ದು, ಇವರು ನೀಡಿರುವ ಮತಗಳೇ ನನ್ನ ಗೆಲುವಿಗೆ ನಿರ್ಣಾಯಕವಾಗಿದ್ದವು ಎಂದು ಬೇಲೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೈ.ಎನ್. ರುದ್ರೇಶ್ ಗೌಡ ತಿಳಿಸಿದರು.

ಅವರು ಬೇಲೂರಿನ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಬೇಲೂರು ಮತ್ತು ಹಳೇಬೀಡು – ಜಾಗವಲ್ ವ್ಯಾಪ್ತಿಗೆ ಒಳಪಡುವ ಪದಾಧಿಕಾರಿಗಳಿಗೆ, ಹೋಬಳಿ ಅಧ್ಯಕ್ಷರುಗಳಿಗೆ ಕಾರ್ಯಕಾರಿನ ಸಮಿತಿ ಸದಸ್ಯರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದರು.  

ದಲಿತರ ಹಿತವನ್ನು ಕಾಪಾಡುವತ್ತ ಕಾಳಜಿ ಕಾಳಜಿ ವಹಿಸಿದ್ದು, ಅವರ ಏಳಿಗೆಗೆ ಸ್ಪಂದಿಸಲು ಸದಾ ಬದ್ದನಾಗಿದ್ದೇನೆ ಎಂದರು. ಕಾಂಗ್ರೆಸ್ ಪಕ್ಷಕ್ಕೆ ಸಾಮಾಜಿಕ ಕಳಕಳಿಯಿದ್ದು ಬಡವರ, ನೊಂದವರ,ಅಹಿಂದ ವರ್ಗದವರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವನಿಯಾಗಿ ನಿಂತಿದ್ದಾರೆ. ಅವರ ಉತ್ತಮ ಬದುಕಿಗೆ ವಿನೂತನ ಯೋಜನೆಗಳನ್ನು ಜಾರಿಗೆ ತಂದು ಕಾರ್ಯಗತಗೊಳಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದು, ಅವರ ನಾಯಕತ್ವವನ್ನು ಬೆಂಬಲಿಸುವತ್ತ ರಾಜ್ಯದ ಜನತೆ ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಮುಂದಾಗಬೇಕಿದೆ ಎಂದು ಶಾಸಕರು ನುಡಿದರು. 

ರೈತರು ದೇಶದಲ್ಲಿ ಶೇ.70 ರಷ್ಟಿದು ಬಡವರಲ್ಲಿ ಬಡವರಿದ್ದಾರೆ. ಅವರ ಕ್ಷೇಮವೂ ಮುಖ್ಯವಾಗಿದ್ದು, ಅವರ ಅಭಿವೃದ್ದಿಗೆ ಕೈ ಜೋಡಿಸಬೇಕಾದುದು ಪ್ರಸ್ತುತ ಅಗತ್ಯ ಎಂದರು. ನನ್ನ ಸಹೋದರ ವೈ.ಎನ್.ಕೃಷ್ಣೇಗೌಡ ಜನರ ಒಡನಾಡಿಯಾಗಿ ಸ್ಪಂದಿಸುತ್ತಿದ್ದು, ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ  ಆಶೀರ್ವಾದ ಮಾಡಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಹಾಸನ ಜಿಲ್ಲಾ ಕಾಂಗ್ರೆಸ್  ಅಧ್ಯಕ್ಷ ಜಾವಗಲ್ ಮಂಜುನಾಥ್ ಮಾತನಾಡಿ, ದಲಿತರು ಆರ್ಥಿಕವಾಗಿ ಸಬಲರಾಗಬೇಕೆಂಬ ದೃಷ್ಠಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಗುತ್ತಿಗೆ ಕಾಮಗಾರಿಗಳಲ್ಲಿ 50 ಲಕ್ಷ ರೂ ಒಳಗಿನ ಕಾಮಗಾರಿಯನ್ನು ಮಾಡಲು ಮೀಸಲಿರಿಸುವಂತಹ ವ್ಯವಸ್ಥೆಯನ್ನು ಜಾರಿಗೆ ತಂದು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಈ ನಿಲುವು ದೇಶದಲ್ಲೆ ಪ್ರಥಮ ಎಂದು ನುಡಿದರು. ನಮಗೆ ಜಾತಿ ಮುಖ್ಯವಲ್ಲ ಪ್ರೀತಿ ಮುಖ್ಯ. ಭವಿಷ್ಯದ ನಾಯಕ ರಾಹುಲ್ ಗಾಂಧಿ ಆಗಿದ್ದು, ಇವರು ಪ್ರಧಾನ ಮಂತ್ರಿ ಆಗಬೇಕೆಂಬ ಹಂಬಲ ನಮ್ಮೆಲ್ಲರದ್ದಾಗಿದೆ. ಜನಸೇವೆಯಿಂದ ಮಾತ್ರವೇ ದೇವರನ್ನು ಕಾಣಲು ಸಾಧ್ಯ ಎಂದರು.

ಹಾಸನ ಜಿಲ್ಲಾ ಕಾಂಗ್ರೆಸ್ ಪ.ಜಾತಿ ಘಟಕದ ಜಿಲ್ಲಾಧ್ಯಕ್ಷ ಡಾ.ಮುನಿಸ್ವಾಮಿ ಮಾತನಾಡಿ, ಧಮನಿತರು, ಬಹುಜನರು, ಸ್ವತಂತ್ರವಾಗಿ ಬದುಕಲು ಕಾಂಗ್ರೆಸ್ ಪಕ್ಷ ಪೂರಕವಾಗಿ ಸ್ಪಂದಿಸುತ್ತಿದ್ದು, ಈ ಅಂಶವನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ದಲಿತರ ಸರ್ವತೋಮುಖ ಬೆಳವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಯೊಂದು ಹಂತದಲ್ಲಿಯೂ ಸ್ಪಂದಿಸುತ್ತಾ ಕಾಳಜಿ ವಹಿಸಿದ್ದು, ದಲಿತರು ಕಾಂಗ್ರೆಸ್ ಪಕ್ಷಕ್ಕೆ ಸದಾ ಋಣಿಯಾಗಿರಬೇಕಿದೆ ಎಂದರು.

ವೇದಿಕೆಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ಖಡಾಖಡಿ ಪೀರ್ ಸಾಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ಪೂರ್ಣೇಶ್, ಹಾಸನ ಜಿಲ್ಲಾ ಕಾಂಗ್ರೆಸ್ ಪ.ಜಾತಿ ಘಟಕದ ಪ್ರಧಾನ ಕಾರ್ಯದರ್ಶಿ ಹೆಚ್.ಟಿ.ಲಕ್ಷ್ಮಣ, ಉಪಾಧ್ಯಕ್ಷ ಕುಮಾರಸ್ವಾಮಿ, ಕಾಂಗ್ರೆಸ್ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಸುರೇಶ್, ಕಾಂಗ್ರೆಸ್ ಮುಖಂಡರಾದ ವೈ.ಎನ್.ಕೃಷ್ಣೇಗೌಡ, ಶಿವರುದ್ರಪ್ಪ, ಬೇಲೂರು ಮತ್ತು ಹಳೇಬೀಡು-ಜಾವಗಲ್ ಬ್ಲಾಕ್ ಕಾಂಗ್ರೆಸ್ ಪ.ಜಾತಿ ಘಟಕದ ಅಧ್ಯಕ್ಷರುಗಳಾದ ಡಿ.ವಿ.ಕುಮಾರಸ್ವಾಮಿ, ಹೆಚ್.ಎಸ್.ರುದ್ರೇಶ್,ತಾ.ಪಂ.ಸದಸ್ಯ ಮಂಜುನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಂಗಮ್ಮ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News