ಮದ್ದೂರು: ರೈತ ಚೇತನ ಪ್ರೊ.ನಂಜುಂಡಸ್ವಾಮಿ ಹುಟ್ಟುಹಬ್ಬ ಆಚರಣೆ

Update: 2018-02-13 17:48 GMT

ಮದ್ದೂರು, ಫೆ.13: ನಗರದ ಮಳವಳ್ಳಿ ರಸ್ತೆಯಲ್ಲಿರುವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪುತ್ಥಳಿ ಆವರಣದಲ್ಲಿ ರೈತಸಂಘದಿಂದ ಮಂಗಳವಾರ ನಂಜುಂಡಸ್ವಾಮಿಯವರ 82ನೆ ಹುಟ್ಟುಹಬ್ಬ ಆಚರಿಸಲಾಯಿತು.

ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ರೈತಸಂಘದ ಮುಖಂಡ ಕೆರೆಮೇಗಳದೊಡ್ಡಿ ವರದರಾಜು, ನಂಜುಂಡಸ್ವಾಮಿ ವಿಶ್ವದ ಮಹಾನ್ ಶಕ್ತಿಯಾಗಿದ್ದು, ರೈತಸಂಘಟನೆ ಬೃಹದಾಕಾರವಾಗಿ ಬೆಳೆಯಲು ಕಾರಣೀಭೂತರಾದರು ಎಂದರು. ಮಹಾನ್ ಸಂಘಟಕ, ಹೋರಾಟಗಾರ ಮಾತ್ರವಲ್ಲದೆ ಅಪಾರ ವಿದ್ವತ್ತು ಹೊಂದಿದ್ದ ನಂಜುಂಡಸ್ವಾಮಿಯವರು ಭ್ರಷ್ಟ ಸರಕಾರಗಳು, ರಾಜಕಾರಣಿಗಳು, ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದರು ಎಂದು ಅವರು ಸ್ಮರಿಸಿದರು.

ರೈತ ಚಳವಳಿ ಆರಂಭದ ಕಾಲದಲ್ಲಿ ನಂಜುಂಡಸ್ವಾಮಿಯವರ ಹೋರಾಟದ ಹಾದಿಯಲ್ಲಿ ತನ್ನಂತಹ ಸಹಸ್ರಾರು ರೈತರು ಸೇರಿಕೊಂಡರು. ವಿದ್ಯಾರ್ಥಿ ಯುವಜನರು ಕೈಜೋಡಿಸಿದರು. ಆ ನೆನಪುಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸಂಘದ ಮುಖಂಡ ಲಿಂಗಪ್ಪಾಜಿ ಮಾತನಾಡಿ, ವಿಶ್ವ ರೈತ ಚೇತನ ನಂಜುಂಡಸ್ವಾಮಿಯವರು ತಮ್ಮ ಇಡೀ ಜೀವನವನ್ನು ರೈತರಿಗೆ ಮುಡಿಪಾಗಿಟ್ಟಿದ್ದರು. ಆ ಚೇತನ ಹಾಕಿಕೊಟ್ಟ ಹಾದಿಯಲ್ಲಿ ಸಂಘಟನೆಯನ್ನು ಮುನ್ನಡೆಸಬೇಕಾಗಿದೆ ಎಂದರು.

ಕೀಳಘಟ್ಟ ನಂಜುಂಡಯ್ಯ, ಚುಂಚಗಹಳ್ಳಿ ಸುರೇಶ್, ಲಿಂಗಪ್ಪಾಜಿ, ಗೊಲ್ಲರದೊಡ್ಡಿ ಅಶೋಕ್, ವೆಂಕಟೇಶ್, ರಾಮಣ್ಣ, ಚೇತನ್, ಜೈವೀರ್, ಕೃಷ್ಣ, ವಿಜಯಕುಮಾರ್, ಶ್ರೀನಿವಾಸ್ ಹಾಗೂ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News