ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆಗೆ ಸೇರಲು ಪಶ್ಚಿಮ ಬಂಗಾಳ ಸರ್ಕಾರ ನಕಾರ

Update: 2018-02-14 03:56 GMT

ಕೃಷ್ಣನಗರ, ಫೆ.14: ಕೇಂದ್ರ ಸರ್ಕಾರ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಘೋಷಿಸಿರುವ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆಯಿಂದ ಹೊರಗುಳಿಯಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ. ಪಶ್ಚಿಮ ಬಂಗಾಳ ಈ ಯೋಜನೆಯಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ ಮೊದಲ ರಾಜ್ಯವಾಗಿದೆ.

"ತೀರಾ ಶ್ರಮವಹಿಸಿ ಗಳಿಸಿದ ನಮ್ಮ ಸಂಪನ್ಮೂಲಗಳನ್ನು ಯೋಜನೆಗೆ ದೇಣಿಗೆಯಾಗಿ ನೀಡುವ ಮೂಲಕ ವ್ಯರ್ಥಗೊಳಿಸಲು ನಾವು ಸಿದ್ಧರಿಲ್ಲ" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

"ಕೇಂದ್ರ ಸರ್ಕಾರದ ಈ ಯೋಜನೆಯಂತೆ ಶೇಕಡ 40ರಷ್ಟು ಸಂಪನ್ಮೂಲವನ್ನು ರಾಜ್ಯ ಸರ್ಕಾರ ನೀಡಬೇಕು. ನಮ್ಮದೇ ಸ್ವಂತ ಯೋಜನೆ ಇರುವಾಗ ಇಂತದ್ದೇ ಮತ್ತೊಂದು ಯೋಜನೆಗೆ ರಾಜ್ಯ ಏಕೆ ಹಣ ನೀಡಬೇಕು? ರಾಜ್ಯ ಸರ್ಕಾರ ತನ್ನ ಸಂಪನ್ಮೂಲ ಹೊಂದಿದ್ದರೆ ಸ್ವಂತ ಯೋಜನೆಯನ್ನು ರೂಪಿಸುತ್ತದೆ" ಎಂದು ಅವರು ಸಾರ್ವಜನಿಕ ರ್ಯಾಲಿಯಲ್ಲಿ ಸ್ಪಷ್ಟಪಡಿಸಿದರು.

ಕೇಂದ್ರದ ಈ ಯೋಜನೆಗೆ 5,500 ಕೋಟಿಯಿಂದ 6,000 ಕೋಟಿ ರೂ.ವರೆಗೆ ವೆಚ್ಚವಾಗುವ ನಿರೀಕ್ಷೆ ಇದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅಂದಾಜು ಮಾಡಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೆ 2,000 ಕೋಟಿ ರೂಪಾಯಿ ನಿಗದಿಪಡಿಸಿದ್ದು, ಉಳಿದ ಹಣವನ್ನು ರಾಜ್ಯಗಳು ಭರಿಸುವಂತೆ ಸೂಚಿಸಿದೆ. ಆದರೆ ನಮ್ಮ ಸರ್ಕಾರ ಈಗಾಗಲೇ ಉಚಿತವಾಗಿ ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ವ್ಯವಸ್ಥೆ ಮಾಡಿದೆ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.

"ಹಿಂದಿನ ಸಿಪಿಎಂ ಸರ್ಕಾರ ಮಾಡಿದ ಸಾಲವನ್ನು ತೀರಿಸುವ ಸಲುವಾಗಿ ಕೇಂದ್ರ ಸರ್ಕಾರ ನಮ್ಮ 48 ಸಾವಿರ ಕೋಟಿ ರೂಪಾಯಿಗಳನ್ನು ಕಿತ್ತುಕೊಂಡರೂ, ನಾವು ಈ ಯೋಜನೆ ಮಾಡಿದ್ದೇವೆ. ಸರ್ಕಾರದ ಸ್ವಾಸ್ಥ್ಯ ಸಾಥಿ ಯೋಜನೆಯಡಿ 50 ಲಕ್ಷ ಮಂದಿ ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಎಂದು ದೀದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News