ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ನ್ಯಾಯ ವ್ಯವಸ್ಥೆಯ ವೈಫಲ್ಯ

Update: 2018-02-14 14:05 GMT

ಮುಂಬೈ,ಫೆ.14: ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿಯ ಹಲವಾರು ಗಣ್ಯರನ್ನು ಖುಲಾಸೆಗೊಳಿಸಿದ ರೀತಿ, ಕಾನೂನು ಪ್ರಕ್ರಿಯೆಯಲ್ಲಿನ ಅಸಂಬದ್ಧತೆಗಳು, ಸಾಕ್ಷಿಗಳು ಒತ್ತಡ ಅಥವಾ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎನ್ನುವುದರ ಸುಳಿವುಗಳು ಮತ್ತು ‘ಕುಚೇಷ್ಟೆ’ಯ ಸಾಕ್ಷಾಧಾರ-ಇವೆಲ್ಲ ನ್ಯಾಯ ಮತ್ತು ನ್ಯಾಯದಾನ ವ್ಯವಸ್ಥೆಯಲ್ಲಿನ ವೈಫಲ್ಯಗಳನ್ನು ಬೆಟ್ಟು ಮಾಡುತ್ತಿವೆ. ಇವು ಪ್ರಕರಣದಲ್ಲಿ ನಾಲ್ಕು ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ್ದ ಬಾಂಬೆ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಅಭಯ ಎಂ.ತಿಪ್ಸೆ ಅವರು ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿರುವ ಕೆಲವು ಅಭಿಪ್ರಾಯಗಳು.

ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಕಳೆದ ವರ್ಷದ ಮಾರ್ಚ್‌ನಲ್ಲಿ ಸೇವೆಯಿಂದ ನಿವೃತ್ತರಾದ ಬಳಿಕ ಇದೇ ಮೊದಲ ಬಾರಿಗೆ ಸೊಹ್ರಾಬುದ್ದೀನ್ ಪ್ರಕರಣದ ಕುರಿತು ಮಾತನಾಡಿರುವ ನ್ಯಾ.ತಿಪ್ಸೆ, ಪ್ರಕರಣವನ್ನು ಪುನರ್‌ಪರಿಶೀಲಿಸಲು ಅಗತ್ಯವಾದರೆ ಸು-ಮೊಟು ಸೇರಿದಂತೆ ತನಗಿರುವ ಎಲ್ಲ ಅಧಿಕಾರಗಳನ್ನು ಬಾಂಬೆ ಉಚ್ಚ ನ್ಯಾಯಾಲಯವು ಬಳಸಬೇಕಿದೆ ಎಂದು ಹೇಳಿದ್ದಾರೆ.

ಹಾಲಿ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯದ ಆದೇಶಗಳಲ್ಲಿ ಕಂಡು ಬಂದಿರುವ ಅಸಮಂಜಸತೆಗಳನ್ನು ‘ಅಸಂಬದ್ಧ’ ಎಂದು ಬಣ್ಣಿಸಿರುವ ಅವರು, ಸೊಹ್ರಾಬುದ್ದೀನ್‌ನನ್ನು ಅಪಹರಿಸಲಾಗಿತ್ತು ಮತ್ತು ಪೂರ್ವಯೋಜಿತ ಎನ್‌ಕೌಂಟರ್ ನಡೆಸಲಾಗಿತ್ತು ಎನ್ನುವುದನ್ನು ನ್ಯಾಯಾಲಯವು ನಂಬಿದೆ, ಆದರೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅದು ಪ್ರಕರಣದಿಂದ ಖುಲಾಸೆಗೊಳಿಸಿದೆ. ಪ್ರಕರಣದಲ್ಲಿಯ ಹಲವಾರು ವಿಷಯಗಳು ಶಂಕೆಯನ್ನು ಸೃಷ್ಟಿಸಿವೆ ಮತ್ತು ಸಾಮಾನ್ಯ ಜ್ಞಾನಕ್ಕೆ ವಿರುದ್ಧವಾಗಿವೆ ಎಂದು ಹೇಳಿದ್ದಾರೆ.

ಹಿರಿಯ ಅಧಿಕಾರಿಗಳಿಗೆ ಮಾತ್ರ ಖುಲಾಸೆ ಭಾಗ್ಯ

ಹಲವಾರು ಆರೋಪಿಗಳ ವಿರುದ್ಧದ ಸಾಕ್ಷಾಧಾರಗಳು ದುರ್ಬಲವಾಗಿವೆ ಎಂಬ ಕಾರಣ ನೀಡಿ ಅವರನ್ನು ಪ್ರಕರಣದಿಂದ ಬಿಡುಗಡೆಗೊಳಿಸಲಾಗಿದೆ. ಆದರೆ ಇದೇ ಸಾಕ್ಷಾಧಾರಗಳನ್ನು ಆಧರಿಸಿ ಕೆಲವು ಆರೋಪಿಗಳ ವಿರುದ್ಧ ವಿಚಾರಣೆಗೆ ನ್ಯಾಯಾಲಯವು ನಿರ್ಧರಿಸಿದೆ ಎಂದಿರುವ ನ್ಯಾ.ತಿಪ್ಸೆ, ಸೊಹ್ರಾಬುದ್ದೀನ್‌ನನ್ನು ಅಪಹರಿಸಲಾಗಿತ್ತು ಎನ್ನುವುದನ್ನು ನೀವು(ನ್ಯಾಯಾಲಯ) ನಂಬಿದ್ದೀರಿ. ಆತನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿತ್ತು ಎನ್ನುವುದನ್ನು ನೀವು ನಂಬಿದ್ದೀರಿ. ಆತನನ್ನು ತೋಟದ ಮನೆಯಲ್ಲಿ ಅಕ್ರಮ ಬಂಧನದಲ್ಲಿರಿಸಲಾಗಿತ್ತು ಎನ್ನುವುದನ್ನೂ ನೀವು ನಂಬಿದ್ದೀರಿ. ಆದರೆ ಈ ಎಲ್ಲದರಲ್ಲಿ ಆಗಿನ ಗುಜರಾತ್ ಡಿಐಜಿ ವಂಝಾರಾ, ಆಗಿನ ರಾಜಸ್ಥಾನ ಎಸ್‌ಪಿ ದಿನೇಶ ಎಂ.ಎನ್. ಮತ್ತು ಆಗಿನ ಗುಜರಾತ್ ಎಸ್‌ಪಿ ರಾಜಕುಮಾರ ಪಾಂಡಿಯನ್ ಅವರು ಭಾಗಿಯಾಗಿದ್ದರು ಎನ್ನುವುದನ್ನು ನೀವು ನಂಬುತ್ತಿಲ್ಲ. ಪೊಲೀಸ್ ಕಾನ್‌ಸ್ಟೇಬಲ್‌ಗಳು ಅಥವಾ ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿಗಳು ಸೊಹ್ರಾಬುದ್ದೀನ್‌ನೊಂದಿಗೆ ಸಂಪರ್ಕ ಹೊಂದಿರಲು ಹೇಗೆ ಸಾಧ್ಯ? ಓರ್ವ ಎಸ್‌ಐ ಆತನನ್ನು ಹೈದರಾಬಾದ್‌ನಿಂದ ಅಪಹರಿಸಿ ಬೇರೆ ರಾಜ್ಯಕ್ಕೆ ಸಾಗಿಸಿದ್ದ ಎಂದು ನೀವು ಹೇಳುತ್ತಿದ್ದೀರಾ? ಆದರೆ ಇದೇ ಸಾಕ್ಷಗಳ ಆಧಾರದಲ್ಲಿ ಎಸ್‌ಪಿಗಳ(ದಿನೇಶ ಮತ್ತು ಪಾಂಡಿಯನ್) ವಿರುದ್ಧ ಯಾವುದೇ ಪ್ರಕರಣಗಳಿಲ್ಲ ಎಂದು ನೀವು ಹೇಳುವಾಗ ಹಿರಿಯ ಅಧಿಕಾರಿಗಳ ವಿಷಯದಲ್ಲಿ ಭಿನ್ನವಾಗಿ ನಡೆದುಕೊಳ್ಳಲಾಗಿದೆ ಎಂಬ ಸಂಶಯವನ್ನು ಹುಟ್ಟಿಸುತ್ತಿದೆ ಎಂದಿದ್ದಾರೆ.

ಹಲವಾರು ಆರೋಪಿಗಳಿಗೆ ಹಲವಾರು ವರ್ಷಗಳ ಕಾಲ ಜಾಮೀನು ನಿರಾಕರಿಸಿರುವುದು ಮತ್ತು ಆ ಆರೋಪಿಗಳ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಪ್ರಕರಣವಿಲ್ಲ ಎಂದು ನ್ಯಾಯಾಲಯವು ಎತ್ತಿ ಹಿಡಿದಿರುವುದು ವಿಲಕ್ಷಣವಾಗಿದೆ. ಕೆಳದರ್ಜೆಯ ಅಧಿಕಾರಿಗಳನ್ನು ಖುಲಾಸೆಗೊಳಿಸಲಾಗಿಲ್ಲ, ಆದರೆ ಹಿರಿಯ ಅಧಿಕಾರಿಗಳ ವಿರುದ್ಧವೂ ಅವೇ ಸಾಕ್ಷಾಧಾರಗಳಿದ್ದರೂ ಅವರನ್ನು ಆರೋಪಮುಕ್ತಗೊಳಿಸಲಾಗಿದೆ ಎಂದಿದ್ದಾರೆ ನ್ಯಾ.ತಿಪ್ಸೆ.

ಜಾಮೀನು ಮಂಜೂರಾತಿ ಕುರಿತು ಪ್ರಶ್ನೆಗಳು

ಮುಂಬೈನ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣದಲ್ಲಿಯ 38 ಆರೋಪಿಗಳ ಪೈಕಿ 15 ಜನರನ್ನು ಖುಲಾಸೆಗೊಳಿಸಲಾಗಿದೆ. ಹೀಗೆ ಖುಲಾಸೆಗೊಂಡ ವರಲ್ಲಿ ವಂಝಾರಾ, ಪಾಂಡಿಯನ್ ಮತ್ತಿತರರು ಸೇರಿದಂತೆ ಆಗ ಗುಜರಾತಿನ ಗೃಹಸಚಿವರಾಗಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಆಗಿನ ರಾಜಸ್ಥಾನ ಗೃಹಸಚಿವ ಗುಲಾಬಚಂದ್ ಕಟಾರಿಯಾ ಅವರೂ ಇದ್ದಾರೆ.

ಪ್ರಕರಣದಲ್ಲಿಯ 30 ಸಾಕ್ಷಿಗಳ ಪೈಕಿ 22 ಸಾಕ್ಷಿಗಳು 2017,ನವೆಂಬರ್‌ನಿಂದ ತಿರುಗಿ ಬಿದ್ದಿರುವ ಹಿನ್ನೆಲೆಯಲ್ಲಿ ನ್ಯಾ.ತಿಪ್ಸೆ ಅವರು, ಪ್ರಕರಣದಲ್ಲಿ ದೋಷಮುಕ್ತಿ ಆದೇಶಗಳನ್ನು ಹೊರಡಿಸಿದ ರೀತಿಯನ್ನು ತಾನು ಪರಿಶೀಲಿಸಿದಾಗ ಹಲವಾರು ಅಸಹಜ ಸಂಗತಿಗಳು ಕಂಡು ಬಂದಿದ್ದವು ಎಂದು ಹೇಳಿದ್ದಾರೆ.

ಬಾಂಬೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾಗ ವಂಝಾರಾ, ಗುಜರಾತ್ ಭಯೋತ್ಪಾದನೆ ನಿಗ್ರಹ ದಳದ ಮಾಜಿ ಡಿವೈಎಸ್‌ಪಿ ಎಂ.ಪರಮಾರ್, ಅಹ್ಮದಾಬಾದ್ ಕ್ರೈಂ ಬ್ರಾಂಚ್‌ನ ಡಿವೈಎಸ್‌ಪಿ ನರೇಂದ್ರ ಕೆ.ಅಮೀನ್ ಮತ್ತು ಗುಜರಾತ್ ಪೊಲೀಸ್ ಎಸ್‌ಐ ಬಿ.ಆರ್.ಚೌಬೆ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ನಡೆಸಿದ್ದ ನ್ಯಾ.ತಿಪ್ಸೆ, ಈ ಪೈಕಿ ಎರಡನ್ನು ತಿರಸ್ಕರಿಸಿದ್ದರು ಮತ್ತು 2013ರಲ್ಲಿ ಅಮೀನ್‌ಗೆ ಹಾಗೂ 2014ರಲ್ಲಿ ವಂಝಾರಾಗೆ ಜಾಮೀನುಗಳನ್ನು ಮಂಜೂರು ಮಾಡಿದ್ದರು.

 ವಂಝಾರಾಗೆ ಜಾಮೀನು ನೀಡಲು ತನಗೆ ಇಷ್ಟವಿರಲಿಲ್ಲ. ಆದರೆ ಸರ್ವೋಚ್ಚ ನ್ಯಾಯಾಲಯವು ಅದಾಗಲೇ ಸುದೀರ್ಘ ಬಂಧನದ ಕಾರಣದಿಂದ ಪ್ರಕರಣದಲ್ಲಿಯ ಇತರ ಆರೋಪಿಗಳಾದ ಪಾಂಡಿಯನ್ ಮತ್ತು ಚೌಬೆ ಅವರಿಗೆ ಜಾಮೀನು ನೀಡಿತ್ತು. ಹೀಗಾಗಿ ಸರ್ವೋಚ್ಚ ನ್ಯಾಯಾಲಯದ ಧೋರಣೆಗಿಂತ ಭಿನ್ನವಾದ ಧೋರಣೆಯನ್ನು ಹೊಂದುವುದು ನ್ಯಾಯಾಂಗದ ಶಿಸ್ತಿಗೆ ವಿರುದ್ಧವಾಗುತ್ತದೆ ಎಂಬ ಕಾರಣದಿಂದ ತಾನು ವಂಝಾರಾಗೆ ಜಾಮೀನು ಮಂಜೂರು ಮಾಡಿದ್ದೆ. ಆದರೂ ವಂಝಾರಾ ವಿರುದ್ಧ ಮೇಲ್ನೋಟಕ್ಕೆ ಸಾಕ್ಷಾಧಾರಗಳಿವೆ ಎನ್ನುವುದನ್ನು ತಾನು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದ್ದೆ. ಆದರೆ ವಿಚಾರಣಾ ನ್ಯಾಯಾಲಯವು ಅದಕ್ಕೆ ಕಿವಿಗೊಡದಿದ್ದಾಗ ತನಗೆ ನೋವಾಗಿತ್ತು ಎಂದಿದ್ದಾರೆ.

2014ರಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ವಿಶೇಷ ಸಿಬಿಐ ನ್ಯಾಯಾಧೀಶ ಬಿ.ಎಚ್.ಲೋಯಾ ಅವರ ಸಾವಿಗೆ ಸಂಬಂಧಿಸಿದಂತೆ ವಿವಾದಗಳಿಂದಾಗಿ ತಾನು ಪ್ರಕರಣದ ಕುರಿತು ಮಾತನಾಡಲು ಆರಂಭಿಸಿದ್ದೇನೆ ಎಂದ ನ್ಯಾ.ತಿಪ್ಸೆ, ಅವರ ಸಾವಿನ ಬಗ್ಗೆ ಪ್ರತಿಕ್ರಿಯಿಸಲು ತಾನು ಬಯಸುವುದಿಲ್ಲ, ಆದರೆ ಅದು ಅಸಹಜವಾಗಿತ್ತು ಎಂದು ಹೇಳುವುದು ನಂಬಲಸಾಧ್ಯವಾಗುತ್ತದೆ. ತಾನು ಅದನ್ನು ನಂಬುವುದಿಲ್ಲ. ಆದರೆ ಲೋಯಾ ಅವರ ಕರೆ ವಿವರಗಳ ದಾಖಲೆಗಳ ಪರಿಶೀಲನೆ ಅಗತ್ಯವಾಗಿದೆ ಎಂದಿದ್ದಾರೆ.

ಅವಸರದ ವರ್ಗಾವಣೆ

 ಲೋಯಾ ಅವರಿಗಿಂತ ಮುಂಚೆ ವಿಶೇಷ ಸಿಬಿಐ ನ್ಯಾಯಾಧೀಶರಾಗಿದ್ದ ಜೆ.ಟಿ.ಉತ್ಪಾತ್ ಅವರು ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸುವ ಮುನ್ನವೇ ಅವಸರದಿಂದ ಅವರನ್ನು ವರ್ಗಾವಣೆಗೊಳಿಸಿದ್ದೇಕೆ ಎನ್ನುವುದನ್ನೂ ಪರಿಶೀಲಿಸಬೇಕಿದೆ. ಅದೇ ರೀತಿ 2011ರಿಂದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿದ್ದ ಲೋಯಾ ಅವರು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ರಿಜಿಸ್ಟ್ರಾರ್ ಜ್ಯುಡಿಷಿಯಲ್ ಎಂದು ನೇಮಕಗೊಂಡ ನಾಲ್ಕೇ ತಿಂಗಳಲ್ಲಿ ಅವರನ್ನು ಸೆಷನ್ಸ್ ನ್ಯಾಯಾಲಯಕ್ಕೆ ಮರು ವರ್ಗಾವಣೆ ಮಾಡಿ ಸೊಹ್ರಾಬುದ್ದೀನ್ ಪ್ರಕರಣದ ವಿಚಾರಣೆಗಾಗಿ ನಿಯೋಜಿಸ ಲಾಗಿತ್ತು. ಇವೆಲ್ಲ ಅಸಹಜ ವಿಷಯಗಳಾಗಿವೆ ಎಂದಿದ್ದಾರೆ.

 2012ರಲ್ಲಿ ಪ್ರಕರಣವನ್ನು ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಿದಾಗ ಆರಂಭದಿಂದ ಅಂತ್ಯದವರೆಗೂ ಒಬ್ಬರೇ ನ್ಯಾಯಾಧೀಶರು ವಿಚಾರಣೆಯನ್ನು ನಡೆಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿತ್ತು ಎನ್ನುವುದನ್ನೂ ನ್ಯಾ.ತಿಪ್ಸೆ ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News