ಪ್ರಮುಖ ಆರೋಪಿ ನೀರವ್ ಮೋದಿ ವಿದೇಶಕ್ಕೆ ಪರಾರಿ, ಬಿಜೆಪಿ ವಿರುದ್ಧ ವಿಪಕ್ಷಗಳ ವಾಗ್ದಾಳಿ

Update: 2018-02-15 10:35 GMT

ಹೊಸದಿಲ್ಲಿ, ಫೆ.15: ರಾಷ್ಟ್ರೀಕೃತ ಪಂಜಾಬ್ ನ್ಯಾಶನಲ್ ಬ್ಯಾಂಕ್(ಪಿಎನ್‌ಬಿ) 11,400 ಕೋ.ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಾಗುವ ಮೊದಲೇ ಪ್ರಮುಖ ಆರೋಪಿ, ಡೈಮಂಡ್ ಉದ್ಯಮಿ ನೀರವ್ ಮೋದಿ ದೇಶ ಬಿಟ್ಟು ಪರಾರಿಯಾಗಿದ್ದಾರೆಂಬ ವರದಿಯ ಹಿನ್ನೆಲೆಯಲ್ಲಿ ವಿಪಕ್ಷಗಳು ಆಡಳಿತರೂಢ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

  ಇದೊಂದು ಹೊಸ ಮೋದಿ ಹಗರಣವೇ ಎಂದು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ,‘‘ನೀರವ್ ಮೋದಿ ಯಾರು?ಇದು ಹೊಸ ಮೋದಿಸ್ಕಾಮ್ ಆಗಿದೆಯೇ?ಲಲಿತ್ ಮೋದಿ ಹಾಗೂ ವಿಜಯ್ ಮಲ್ಯರಂತೆಯೇ ಸರಕಾರದಲ್ಲಿದ್ದವರ ನೆರವಿನಿಂದಲೇ ನೀರವ್ ಕೂಡ ಭಾರತ ಬಿಟ್ಟು ಪರಾರಿಯಾಗಿದ್ದಾರೆಯೇ? ಸಾರ್ವಜನಿಕ ಹಣದೊಂದಿಗೆ ಪರಾರಿಯಾಗುವುದು ಸಾಮಾನ್ಯವಾಗಿ ಬಿಟ್ಟಿದೆಯೇ? ಇದಕ್ಕೆ ಜವಾಬ್ದಾರರು ಯಾರು? ಎಂದು ಸುರ್ಜೇವಾಲಾ ಟ್ವೀಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

‘‘ನೀರವ್ ಮೋದಿ ಅಥವಾ ವಿಜಯ ಮಲ್ಯ ಬಿಜೆಪಿ ಸರಕಾರದ ವೌನ ಸಮ್ಮತಿಯಿಲ್ಲದೇ ದೇಶಬಿಟ್ಟು ಪರಾರಿಯಾಗಲು ಸಾಧ್ಯವಿದೆಯೇ? ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಸಿಪಿಐ(ಎಂ) ಮುಖಂಡ ಸೀತಾರಾಮ್ ಯೆಚೂರಿ ಕೂಡ ಬೆಳವಣಿಗೆಯ ಬಗ್ಗೆ ಟ್ವಿಟರ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದು, ‘‘ಜ.31 ರಂದು ಎಫ್‌ಐಆರ್ ದಾಖಲಾಗುವ ಮೊದಲೇ ಈ ವ್ಯಕ್ತಿ(ನೀರವ್ ಮೋದಿ) ದೇಶಬಿಟ್ಟು ಪರಾರಿಯಾಗಿದ್ದರೆ, ಎಫ್‌ಐಆರ್ ದಾಖಲಾಗುವ ಒಂದು ವಾರದ ಮೊದಲು ಡಾವೋಸ್‌ನಲ್ಲಿ ಪ್ರಧಾನಮಂತ್ರಿಯೊಂದಿಗೆ ನೀರವ್ ಫೋಟೊ ತೆಗೆದುಕೊಂಡಿದ್ದರು. ಭಾರತದಿಂದ ಪರಾರಿಯಾದ ಬಳಿಕ ಹೀಗೆ ಮಾಡಿದ್ದಾರೆಯೇ? ಎಂದು ಮೋದಿ ಸರಕಾರ ಸ್ಪಷ್ಟಪಡಿಸಬೇಕಾಗಿದೆ ಎಂದರು.

 ಮುಂಬೈನ ತನ್ನ ಶಾಖೆಯೊಂದರಲ್ಲಿ 11,360 ಕೋ.ರೂ. ವಂಚನೆಯಾಗಿದೆ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ಬುಧವಾರ ಹೇಳಿತ್ತು. ಪಿಎನ್‌ಬಿಯ ಇಬ್ಬರು ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಗೋಕುಲ್‌ನಾಥ್ ಶೆಟ್ಟಿ ಹಾಗೂ ಮನೋಜ್ ಹನುಮಂತ್ ಖರಾಟ್ ಅವರು ನೀರವ್ ಮೋದಿ ಅಕ್ರಮ ಅವ್ಯವಹಾರಕ್ಕೆ ನೆರವು ನೀಡಿರುವುದನ್ನು ಪತ್ತೆ ಹಚ್ಚಲಾಗಿದೆ. ಈ ಇಬ್ಬರ ಹೆಸರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಸುಮಾರು 10 ರಾಷ್ಟ್ರೀಕೃತ ಬ್ಯಾಂಕ್ ಉದ್ಯೋಗಿಗಳು ಜಾರಿ ನಿರ್ದೇಶನಾಲಯದ ತನಿಖೆಗೆ ಗುರಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News