ಯಡಿಯೂರಪ್ಪ ಅವರ ‘ಚಿಕನ್’ ಹೇಳಿಕೆ ಬಿಜೆಪಿಯ ರೋಗಗ್ರಸ್ತ ಮನಸ್ಥಿತಿಯ ಪ್ರತಿಬಿಂಬ: ಶಿವಸೇನೆ

Update: 2018-02-15 17:12 GMT

ಮುಂಬೈ, ಫೆ. 15: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇವಾಲಯಕ್ಕೆ ಭೇಟಿ ನೀಡುವ ಮುನ್ನ ಚಿಕನ್ ತಿಂದಿದ್ದಾರೆ ಎಂಬ ಹೇಳಿಕೆಗೆ ಕರ್ನಾಟಕದ ಬಿಜೆಪಿ ವರಿಷ್ಠ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ, ಚುನಾವಣೆ ಸಂದರ್ಭ ಇಂತಹ ವಿಷಯಗಳ ಬಗ್ಗೆ ಚರ್ಚೆ ನಡೆಸುವುದು ಬಿಜೆಪಿಯ ರೋಗಗ್ರಸ್ತ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದಿದೆ.

 ಕರ್ನಾಟಕದ ಉತ್ತರ ಭಾಗದಲ್ಲಿ ಚುನಾವಣಾ ಪ್ರವಾಸದ ವೇಳೆ ರಾಹುಲ್ ಗಾಂಧಿ ಕೋಳಿ ಮಾಂಸ ತಿಂದು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಮೂರು ದಿನಗಳ ಹಿಂದೆ ಯಡಿಯೂರಪ್ಪ ಹೇಳಿದ್ದರು.

‘‘ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುಜರಾತ್‌ನಲ್ಲಿ ಬಿಜೆಪಿ ಕುಟುಂಬಕ್ಕೆ ನಿದ್ದೆ ಇಲ್ಲದಂತೆ ಮಾಡಿದ್ದರು. ಇದು ಕರ್ನಾಟಕದಲ್ಲೂ ಪುನಾರಾವರ್ತನೆಯಾಗುವಂತೆ ಕಾಣುತ್ತಿದೆ. ರಾಹುಲ್ ಗಾಂಧಿ ಗುಜರಾತ್‌ನಲ್ಲಿ ಅಸಂಖ್ಯ ದೇವಾಲಯಗಳಿಗೆ ಭೇಟಿ ನೀಡಿದ್ದರು ಹಾಗೂ ಅಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.’’ ಆಗ ಬಿಜೆಪಿ ರಾಹುಲ್ ಗಾಂಧಿ ಅವರನ್ನು ಗಂಭೀರವಾಗಿ ಟೀಕಿಸಿತ್ತು. ಕಾಂಗ್ರೆಸ್ ನಾಯಕ ‘ಹಿಂದುತ್ವ’ ಸ್ವೀಕರಿಸಿದರೆ ತಮ್ಮ ಅಸ್ತಿತ್ವಕ್ಕೆ ಉಂಟಾಗುವ ಧಕ್ಕೆ ಬಗ್ಗೆ ಆತಂಕಗೊಂಡಿತ್ತು ಎಂದು ಸೇನಾ ತನ್ನ ಮುಖವಾಣಿಯಾದ ‘ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಿದೆ. ಚುನಾವಣಾ ಪ್ರಚಾರದ ಸಂದರ್ಭ ರಾಹುಲ್ ಗಾಂಧಿ ಕೊಪ್ಪಳ ಜಿಲ್ಲೆ ಕನಕ ಗಿರಿಯಲ್ಲಿರುವ ಕನಕಾಚಲ ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಭೇಟಿ ನೀಡಿದ್ದರು. ‘ಕಳೆದ ವರ್ಷ ಗುಜರಾತ್ ಚುನಾವಣೆಗೆ ಮುನ್ನ ‘ಮೃದು ಹಿಂದುತ್ವ’ವನ್ನು ಅನುಸರಿಸುವ ಮೂಲಕ ಏನು ಮಾಡಿದರೋ ಅದೇ ರೀತಿ ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಅಂಚಿಗೆ ಸರಿಸಲಿದೆ ಎಂದು ಸಾಮ್ನಾ ತನ್ನ ಸಂಪಾದಕೀಯದಲ್ಲಿ ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News