ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: ರಾಜ್ಯ ಆರೋಗ್ಯ ಪರಿಷತ್ತು ಸ್ಥಾಪನೆ; ಸಿದ್ದರಾಮಯ್ಯ

Update: 2018-02-16 14:00 GMT

ಬೆಂಗಳೂರು, ಫೆ.16: ಆರೋಗ್ಯ ವಲಯಗಳ ನೀತಿ ಮತ್ತು ಕಾರ್ಯಕ್ರಮಗಳ ಬಗ್ಗೆ ಶಿಫಾರಸ್ಸು ನೀಡಲು ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಕಾರ್ಯಕ್ಷಮತೆ ಹಾಗೂ ಪರಿಣಾಮಕಾರಿತ್ವ, ಕರ್ನಾಟಕ ಖಾಸಗಿ ವೈದ್ಯಕೀಯ ಕಾಯ್ದೆಯ ಅನುಷ್ಠಾನದ ಮೇಲ್ವಿಚಾರಣೆ ಮಾಡಲು ‘ರಾಜ್ಯ ಆರೋಗ್ಯ ಪರಿಷತ್ತು’ ಅನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

* ರಾಜ್ಯದ ಎಲ್ಲರಿಗೂ ಪ್ರಥಮ ಹಾಗೂ ನಿರ್ದಿಷ್ಟ ದ್ವೀತೀಯ ಮತ್ತು ತೃತೀಯ ಹಂತದ ಚಿಕಿತ್ಸೆ ದೊರಕುವಂತೆ ‘ಆರೋಗ್ಯ ಕರ್ನಾಟಕ ಯೋಜನೆ’ಯನ್ನು ಫೆಬ್ರವರಿ 2018 ರಲ್ಲಿ ಆರಂಭಿಸಲಾಗುವುದು ಮತ್ತು ಈ ವರ್ಷದ ಅಂತ್ಯದೊಳಗೆ ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು.

* ಮುಂದಿನ 7 ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ವ್ಯಾಪಕ ಪ್ರಾಥಮಿಕ ಆರೋಗ್ಯ ಸೇವೆಗಳ ಒದಗಿಸಲು ಪ್ರತಿ 5 ಸಾವಿರ ಜನಸಂಖ್ಯೆಗೆ ಹಾಲಿ ಇರುವ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ 9 ಸಾವಿರ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಮತ್ತು ಕಾಯಿಲೆಗಳ ನಿಯಂತ್ರಣ ಹಾಗೂ ಸಮುದಾಯದ ಸ್ವಾಸ್ಥದ ಮೇಲೆ ಕೇಂದ್ರೀಕರಿಸಲಾಗಿದೆ. 2018-19ನೆ ಸಾಲಿನಲ್ಲಿ 571 ಕೇಂದ್ರಗಳನ್ನು ಸ್ಥಾಪಿಸಲಾಗುವುದು.

* ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಸೇವೆಗಳನ್ನು ಬಲಪಡಿಸಲು, ಈಗಿರುವ ಶಿಶು ಮರಣ ಪ್ರಮಾಣ ಹಾಗೂ ತಾಯಿ ಮರಣ ಪ್ರಮಾಣ ಕಡಿಮೆಗೊಳಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ಮತ್ತು ಉತ್ತಮ ತಾಂತ್ರಿಕ ಸೇವೆಗಳನ್ನು ಬಳಸಿ ಮುಂದಿನ 7 ವರ್ಷಗಳಲ್ಲಿ ರಾಜ್ಯದಲ್ಲಿಯೂ ಈ ಪ್ರಮಾಣವನ್ನು ಕಡಿಮೆಗೊಳಿಸಲಾಗುವುದು.

* ಪ್ರಾಥಮಿಕ ಆರೋಗ್ಯ ಆರೈಕೆಯಲ್ಲಿಯೇ ನಿರ್ದಿಷ್ಟ ತಂತ್ರಜ್ಞಾನವನ್ನು ಬಳಸಿ ಸಾಂಕ್ರಾಮಿಕ ಖಾಯಿಲೆಗಳನ್ನು ಶೀಘ್ರ ಪತ್ತೆ ಹಚ್ಚಿ ನಿರ್ವಹಣೆಯನ್ನು ಮಾಡಲಾಗುವುದು. ಇದರಿಂದ ಸರಕಾರಕ್ಕೆ ಮತ್ತು ರೋಗಿಗಳಿಗೆ ಹೊರೆಯಾಗದಂತೆ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ದೊರೆಯವಂತೆ ಮಾಡಲಾಗುವುದು.

* ಗುಣಮಟ್ಟದ ಆರೋಗ್ಯ ಸೇವೆಗಳನ್ನು ಸುಧಾರಿಸಲು ಎಲ್ಲ ಪ್ರಮುಖ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳನ್ನು ಎನ್‌ಎಬಿಎಚ್ ಅಡಿಯಲ್ಲಿ ಪ್ರಮಾಣೀಕರಣ ಗೊಳಿಸಲಾಗುವುದು. ಶಿಶು ಜನನ ಸಂಖ್ಯೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದರ ಮೂಲಕ ಸಾರ್ವಜನಿಕ ಹೊಣೆಗಾರಿಕೆ ಹೆಚ್ಚಿಸಲಾಗುವುದು.

* ಮಾನಸಿಕ ರೋಗದಿಂದ ಬಳಲುವ ರೋಗಿಗಳ ಹಕ್ಕುಗಳನ್ನು ರಕ್ಷಿಸಲು, ಸೂಕ್ತ ಚಿಕಿತ್ಸೆ ನೀಡಲು ಮತ್ತು ಮಾನಸಿಕ ಆರೋಗ್ಯ ವರ್ಧನೆ ಅನುಸಾರ ಮಾನಸಿಕ ಆರೋಗ್ಯ ಆರೈಕೆ ಕಾರ್ಯಕ್ರಮವನ್ನು ಪುನರ್ ರಚಿಸಲಾಗುವುದು.

* 2018-19 ನೆ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒಟ್ಟಾರೆಯಾಗಿ 6,645 ಕೋಟಿ ರೂ.ಗಳನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News