ಕಳ್ಳತನ ಪ್ರಕರಣದ ಆರೋಪಿ ಮಹಿಳೆಗೆ ಪತ್ರಿಕಾಗೋಷ್ಠಿಯಲ್ಲೇ ಎಸಿಪಿಯಿಂದ ಕಪಾಳಮೋಕ್ಷ!

Update: 2018-02-18 10:47 GMT

ಹೈದರಾಬಾದ್, ಫೆ.18: ಕಳ್ಳತನ ಆರೋಪದಲ್ಲಿ ಬಂಧಿತಳಾಗಿದ್ದ ಮಹಿಳೆಯೊಬ್ಬಳಿಗೆ ಪತ್ರಿಕಾಗೋಷ್ಠಿಯಲ್ಲೇ ಕಪಾಳಮೋಕ್ಷ ಮಾಡಿದ ಬೇಗಂಪೇಟೆ ಸಹಾಯಕ ಪೊಲೀಸ್ ಕಮಿಷನರ್ ಎಸ್.ರಂಗಾವ್ ಅವರನ್ನು ವರ್ಗಾಯಿಸಲಾಗಿದೆ.

ಆಭರಣ ಅಂಗಡಿಯ ಮಾಲಕರ ಗಮನವನ್ನು ಬೇರೆಡೆಗೆ ಸೆಳೆದು ಮಳಿಗೆಯಲ್ಲಿ ಕಳ್ಳತನ ನಡೆಸಿದ ಆರೋಪದ ಮೇರೆಗೆ ಮಾಂಗಾ, ರಾಣಿ ಮತ್ತು ಸ್ವಾತಿ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿ ಮಹಿಳೆಗೆ ಸಹಾಯಕ ಪೊಲೀಸ್ ಕಮಿಷನರ್ ಕಪಾಳಮೋಕ್ಷ ಮಾಡುತ್ತಿರುವುದನ್ನು ಕ್ಯಾಮರಾದಲ್ಲಿ ಸೆರೆಯಾಗಿದೆ.

ಆರೋಪಿಗಳನ್ನು ಮಾಧ್ಯಮದ ಮುಂದೆ ಹಾಜರುಪಡಿಸಿದ ಸಂದರ್ಭ ಮಾಂಗಾ, "ನಾನು ಅಪರಾಧದಲ್ಲಿ ಶಾಮೀಲಾಗಿಲ್ಲ. ಪೊಲೀಸರು ತಪ್ಪಾಗಿ ನನ್ನನ್ನು ಸಿಲುಕಿಸಿದ್ದಾರೆ" ಎಂದು ಹೇಳಿದ್ದಳು. ಇದರಿಂದ ಕೋಪಗೊಂಡ ಎಸಿಪಿ ಸ್ಥಳದಲ್ಲೇ ಮಹಿಳೆಯ ಕೆನ್ನೆಗೆ ಹೊಡೆದರು. ಬಳಿಕ ಮಹಿಳೆಯನ್ನು ಕೊಠಡಿಗೆ ಕರೆದೊಯ್ಯುವಂತೆ ಇತರ ಅಧಿಕಾರಿಗಳಿಗೆ ಸೂಚಿಸಿದರು. ಈ ದೃಶ್ಯಗಳು ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ತೆಲಂಗಾಣದಲ್ಲಿ ಪೊಲೀಸ್ ಪಡೆಯನ್ನು ಜನಸ್ನೇಹಿ ಮಾಡಲು ಉದ್ದೇಶಿಸಿದ್ದು, ಎಸಿಪಿ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. "ಎಸಿಪಿ ತಾಳ್ಮೆ ಕಳೆದುಕೊಂಡ ಬಗ್ಗೆ ಅವರಿಂದ ವಿವರಣೆ ಕೇಳುತ್ತೇವೆ ಹಾಗೂ ಈ ಬಗ್ಗೆ ತನಿಖೆ ನಡೆಸುತ್ತೇವೆ. ಹೈದರಾಬಾದ್ ಪೊಲೀಸ್ ಆಯುಕ್ತ ವಿ.ವಿ.ಶ್ರೀನಿವಾಸ ರಾವ್ ಈ ಬಗ್ಗೆ ತನಿಖೆ ಆರಂಭಿಸುತ್ತಾರೆ" ಎಂದು ಉತ್ತರ ವಲಯ ಡಿಸಿಪಿ ಬಿ.ಸುಮತಿ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News