ಆಧಾರ್ ಜಾಹೀರಾತು ಖರ್ಚುಗಳ ಬಗ್ಗೆ ಆರ್ ಟಿಐ ಅರ್ಜಿ: ವಿವರ ನೀಡಲು ನಿರಾಕರಿಸಿದ ಯುಐಡಿಎಐ!

Update: 2018-02-18 11:22 GMT

ಹೊಸದಿಲ್ಲಿ, ಫೆ.18: ಹನ್ನೆರಡು ಅಂಕಿಗಳ ಬಯೋಮೆಟ್ರಿಕ್ ಆಧಾರಿತ ವಿಶಿಷ್ಟ ಗುರುತಿಸುವಿಕೆ ಸಂಖ್ಯೆಯನ್ನು ಪ್ರಚುರಪಡಿಸುವ ಸಲುವಾಗಿ ಜಾಹೀರಾತಿಗೆ ಮಾಡಿದ ವೆಚ್ಚವನ್ನು ಬಹಿರಂಗಗೊಳಿಸಲು ವಿಶಿಷ್ಟ ಗುರುತು ಅಭಿವೃದ್ಧಿ ಪ್ರಾಧಿಕಾರ (ಯುಐಡಿಎಐ) ನಿರಾಕರಿಸಿದೆ.

ಅರ್ಥಶಾಸ್ತ್ರಜ್ಞೆ ರೀತಿಕಾ ಖೇರಾ ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಉತ್ತರಿಸಲು ಯುಐಡಿಎಐ ನಿರಾಕರಿಸಿದೆ. 2017ರ ನವೆಂಬರ್ 15ರಂದು ಖೇರಾ ಅರ್ಜಿ ಸಲ್ಲಿಸಿ, ಯುಐಎಡಿಐ 2009ರಲ್ಲಿ ಜಾರಿಗೆ ಬಂದ ಬಳಿಕ ನೋಂದಣಿಗೆ ನೇಮಕ ಮಾಡಿಕೊಂಡ ಸಂಸ್ಥೆಯ ವಿವರ ಮತ್ತು ಪ್ರತಿ ಹಣಕಾಸು ವರ್ಷದಲ್ಲಿ ಪ್ರತಿ ಏಜೆನ್ಸಿಗೆ ಮಾಡಿದ ವೆಚ್ಚದ ವಿವರ ನೀಡುವಂತೆ ಕೋರಿದ್ದರು. ಇದಕ್ಕೆ 2018ರ ಜನವರಿ 3ರಂದು ಪ್ರಾಧಿಕಾರ ಉತ್ತರಿಸಿದೆ. ಆದರೆ ಜಾಹೀರಾತು ಮತ್ತು ಪ್ರಚಾರಕ್ಕೆ ಮಾಡಿದ ವೆಚ್ಚದ ವಿವರ ಬಹಿರಂಗಪಡಿಸಲು ನಿರಾಕರಿಸಿದೆ.

ಯುಐಡಿಎಐ ನೀಡಿದ ಉತ್ತರದ ಪ್ರತಿ ಹಿಂದೂಸ್ತಾನ್ ಟೈಮ್ಸ್ ಗೆ ಲಭ್ಯವಾಗಿದ್ದು, ಈ ಬಗ್ಗೆ ಸ್ಪಷ್ಟನೆ ಕೇಳಿ ಮಾಡಿದ ಇ-ಮೇಲ್‍ಗಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಉಪ ಮಹಾನಿರ್ದೇಶಕ (ಮಾಧ್ಯಮ), ಸಹಾಯಕ ಮಹಾನಿರ್ದೇಶಕ ಮತ್ತು ಕೇಂದ್ರೀಯ ಸಾರ್ವಜನಿ ಮಾಹಿತಿ ಅಧಿಕಾರಿಗಳು ಸ್ಪಂದಿಸಿಲ್ಲ.

"ಇದು ಯಾವ ರಹಸ್ಯ ಮಾಹಿತಿಯೂ ಅಲ್ಲ ಅಥವಾ ಹಾನಿಕಾರಕ ಪರಿಣಾಮ ಬೀರುವ ಅಂಶವೂ ಅಲ್ಲ. ಆದಾಗ್ಯೂ ಏಕೆ ಇದನ್ನು ಸರ್ಕಾರ ಬಹಿರಂಗಪಡಿಸಿಲ್ಲ ಎನ್ನುವುದು ಯಕ್ಷಪ್ರಶ್ನೆ" ಎಂದು ಸೆಂಟರ್ ಫಾರ್ ಎಕನಾಮಿಕ್ ಸ್ಟಡೀಸ್ ಅಂಡ್ ಪ್ಲಾನಿಂಗ್‍ನ ಸಹಾಯಕ ಪ್ರೊಫೆಸರ್ ಹಿಮಾಂಶು ಹೇಳಿದ್ದಾರೆ. ಇದರ  ಬ್ರಾಂಡಿಂಗ್ ಮತ್ತು ಪ್ರಚಾರಕ್ಕೆ ಬಳಸಿರುವುದು ಸಾರ್ವಜನಿಕರ ಹಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯುಐಡಿಎಐ, ಉತ್ತರಿಸದಿರಲು ಕಾರಣವನ್ನೂ ನೀಡಿಲ್ಲ. ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 8 (1) ಅಡಿಯಲ್ಲಿ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಾದರೆ ಅದಕ್ಕೆ ಕಾರಣಗಳನ್ನು ತಿಳಿಸುವುದು ಕಡ್ಡಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News