ಮಡಿಕೇರಿ: ತಾರಾಲಯ ವೀಕ್ಷಣೆಗೆ ಸಚಿವರಿಂದ ಚಾಲನೆ

Update: 2018-02-18 12:59 GMT

ಮಡಿಕೇರಿ, ಫೆ.18: ರಾಜ್ಯದ 5 ಕಡೆ ಸಂಚಾರಿ ತಾರಾಲಯ ಆರಂಭಿಸಲಾಗಿದ್ದು, ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 1.50 ಲಕ್ಷ ವಿದ್ಯಾರ್ಥಿಗಳು ಸಂಚಾರಿ ತಾರಾಲಯದ ಮೂಲಕ ಖಗೋಳ ವೀಕ್ಷಣೆ ಮಾಡಿದ್ದು, ಮುಂದಿನ ದಿನಗಳಲ್ಲಿ 5 ಲಕ್ಷ ವಿದ್ಯಾರ್ಥಿಗಳಿಗೆ ಖಗೋಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಎಂ.ಆರ್.ಸೀತಾರಾಂ ತಿಳಿಸಿದ್ದಾರೆ.   

ಸಂಚಾರಿ ಡಿಜಿಟಲ್ ತಾರಾಲಯ, ಶಾಲೆಯ ಅಂಗಳದಲ್ಲಿ ತಾರಾಲಯ ವೀಕ್ಷಣೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎಂ.ಆರ್.ಸೀತಾರಾಂ ರವರು ನಗರದ ಜೂನಿಯರ್ ಕಾಲೇಜಿನಲ್ಲಿ ಭಾನುವಾರ ಚಾಲನೆ ನೀಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಮಕ್ಕಳಲ್ಲಿ ವಿಜ್ಞಾನ ವಿಷಯ ಮಹತ್ವದ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಸಂಚಾರಿ ತಾರಾಲಯ ಆರಂಭಿಸಲಾಗಿದೆ ಎಂದರು.ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರದ ಬಗ್ಗೆ ಮಾಹಿತಿ ನೀಡುವುದು ಪ್ರಮುಖವಾಗಿದ್ದು, ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ವಿಜ್ಞಾನ ವಿಷಯವನ್ನು ಪಠ್ಯದಲ್ಲಿ ಓದುತ್ತಾರೆ. ಆ ದಿಸೆಯಲ್ಲಿ ತಾರಾಯಲದ ಮೂಲಕ ವೀಕ್ಷಣೆ ಮಾಡಿ ಖಗೋಳ ಮಂಡಲದ ಬಗ್ಗೆ ಮಾಹಿತಿ ತಿಳಿದುಕೊಳ್ಳುವಲ್ಲಿ ಸಂಚಾರಿ ತಾರಾಲಯ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.  

ಸಂಚಾರಿ ತಾರಾಲಯದಲ್ಲಿ ಸೂರ್ಯನ ನಿಗೂಢ ರಹಸ್ಯ, ಸೂರ್ಯ, ಚಂದ್ರ, ಭೂಮಿ ಹಾಗೂ ನಕ್ಷತ್ರಗಳ ಚಲನವಲನ, ಜೊತೆಗೆ ಹೈಡ್ರೋಜನ್ ಬಾಂಬ್ ಬಳಸುವುದರಿಂದ ಭೂಮಿಯ ಮೇಲೆ ಉಂಟಾಗುವ ದುಷ್ಪರಿಣಾಮ ಮತ್ತಿತರ ಬಗ್ಗೆ ತಾರಾಲಯದಲ್ಲಿ ವೀಕ್ಷಣೆ ಮಾಡಬಹುದಾಗಿದೆ.    

ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕರಾದ ಕೆ.ಎ.ಯಾಕುಬ್, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿ.ಪಂ.ಯೋಜನಾ ನಿರ್ದೇಶಕರಾದ ಸಿದ್ದಲಿಂಗಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಆರ್.ಕರೀಗೌಡ, ತಹಶೀಲ್ದಾರರಾದ ಕುಸುಮ,  ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗುರುರಾಜ್, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾದ ಶಿವರಾಮ್, ಸಂಚಾರಿ ತಾರಾಲಯದ ವರ್ನಾಜ್ ಸಂಸ್ಥೆಯ ನಿರ್ದೇಶಕರಾದ ಅನಂತ ಕುಲಕರ್ಣಿ, ಚರಂತಯ್ಯ ಇತರರು ಹಾಜರಿದ್ದರು.   

ತಾರಾಲಯ ಮಾಹಿತಿ
ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಆವಿಸ್ಕಾರಗಳ ಮೂಲಕ ಮಾನವ ನಭೋಮಂಡಲದ ವಿಸ್ಮಯ ಮತ್ತು ನಿಗೂಢತೆಯನ್ನು ಭೇದಿಸುವಲ್ಲಿ ನಿರಂತರವಾಗಿ ಯಶಸ್ವಿಯಾಗುತ್ತಿದ್ದಾರೆ. ಇಂತಹ ವಿಜ್ಞಾನ ಅಚ್ಚರಿಗಳು ಹಾಗೂ ತಾರಾಮಂಡಲದ ಕೌತುಕಗಳನ್ನು ತಾರಾಲಯಗಳಲ್ಲಿ ನೋಡಿ ತಿಳಿದುಕೊಳ್ಳಬಹುದಾಗಿದೆ. ತಾರಾಲಯಗಳು ಗೋಳಾಕಾರದ ವಿಶೇಷ ಗೊಮ್ಮಟವನ್ನು ಹೊಂದಿದ್ದು, ಇದರಲ್ಲಿ ಗ್ರಹ, ನಕ್ಷತ್ರ ಹಾಗೂ ಇತರೆ ಆಕಾಶಕಯಗಳನ್ನು ಹೊಂದಿರುವ ಕಾಲ್ಪನಿಕ ಆಕಾಶವನ್ನು ಸೃಷ್ಟಿಸಬಹುದಾಗಿದೆ. ಇಂತಹ ನೈಜ ರೂಪದಲ್ಲಿರುವ ಆಕಾಶದ ಮುಖಾಂತರ ಖಗೋಳ ವಿಜ್ಞಾನದ ಕುತೂಹಲಕಾರಿ ವಿಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ. 

ಸಂಚಾರಿ ತಾರಾಲಯದ ವೈಶಿಷ್ಟ್ಯಗಳು: ಗಾಳಿ ತುಂಬುವುದರ ಮೂಲಕ ರಚಿತವಾಗಿರುವ ಪ್ರೊಜೆಕ್ಟರ್, ಗೋಳಾಕಾರದ ಗುಮ್ಮಟ-ಆಸನ ಸಾಮರ್ಥ್ಯ 30 ರಿಂದ 40 ವಿದ್ಯಾರ್ಥಿಗಳು ಕುಳಿತು ವೀಕ್ಷಣೆ ಮಾಡಬಹುದಾಗಿದೆ. ಫಿಶ್-ಐ-ಲೆನ್ಸ್ ಜೋಡಿಸಿರುವ ಡಿಜಿಟಲ್ ಪ್ರೊಜೆಕ್ಟರ್-ಖಗೋಳ ಹಾಗೂ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ ವೀಡಿಯೋಗಳನ್ನು 360 ಡಿಗ್ರಿಯಲ್ಲಿ ಪ್ರೊಜೆಕ್ಟ್ ಮಾಡಿ 180 ಡಿಗ್ರಿಯಲ್ಲಿ ವೀಕ್ಷಿಸಬಹುದು. ಜೊತೆಗೆ ಗುಣಮಟ್ಟದ ಶಬ್ಧ ವ್ಯವಸ್ಥೆ ಹೊಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News