ರಾಜಸ್ಥಾನ: ಪೆಹ್ಲು ಖಾನ್ ಹತ್ಯೆಯ ನಂತರ ಜಾನುವಾರು ಮಾರಾಟದಲ್ಲಿ ಭಾರೀ ಇಳಿಕೆ

Update: 2018-02-18 14:09 GMT

# ರೈತರಿಗೆ ಸಂಕಷ್ಟ

ಜೈಪುರ,ಫೆ.18: ಈ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ತನ್ನ ಸರಕಾರದ ಕೊನೆಯ ಮುಂಗಡಪತ್ರದಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು 16 ಕೋ.ರೂ.ವೆಚ್ಚದಲ್ಲಿ ಬೀದಿ ಹೋರಿಗಳಿಗಾಗಿ ‘ನಂದಿ ಗೋಶಾಲೆ’ಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ.

ಆದರೆ ಸರಕಾರದ ಈ ಹೆಜ್ಜೆಯು ಸಂಪೂರ್ಣವಾಗಿ ಜಾನುವಾರುಗಳ ಕಲ್ಯಾಣಕ್ಕಾ ಗಿಯೇ ಎಂದು ಭಾವಿಸಬೇಕಿಲ್ಲ. ರಾಜ್ಯದಲ್ಲಿ 2013ರಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಜಾನುವಾರುಗಳ ವ್ಯಾಪಾರವು ತೀವ್ರ ಹಿನ್ನಡೆ ಕಂಡಿದೆ. 2010-11ರಲ್ಲಿ ರಾಜ್ಯದಲ್ಲಿ ನಡೆದಿದ್ದ ಹತ್ತು ಜಾನುವಾರು ಜಾತ್ರೆಗಳಲ್ಲಿ 31,299 ಜಾನುವಾರುಗಳು ಮಾರಾಟವಾಗಿದ್ದರೆ 2016-17ರಲ್ಲಿ ಈ ಸಂಖ್ಯೆ 2,973ಕ್ಕೆ ಕುಸಿದಿತ್ತು. ಹರ್ಯಾಣದ ಹೈನುಗಾರ ಪೆಹ್ಲು ಖಾನ್ ಅವರು ಹೈನು ವ್ಯವಸಾಯಕ್ಕಾಗಿ ರಾಜಸ್ಥಾನದಿಂದ ದನಗಳನ್ನು ಸಾಗಿಸುತ್ತಿದ್ದಾಗ ಆಲ್ವಾರ್‌ನಲ್ಲಿ ಗೋರಕ್ಷಕರಿಂದ ಕೊಲೆಯಾದ ಒಂದು ವರ್ಷದ ಬಳಿಕವಂತೂ ಈ ಸಂಖ್ಯೆ ಪಾತಾಳಕ್ಕಿಳಿದಿದೆ. ರಾಜ್ಯದಲ್ಲಿ ಕೇವಲ 460 ಜಾನುವಾರುಗಳು ಮಾರಾಟಗೊಂಡಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ.85ರಷ್ಟು ಕಡಿಮೆಯಾಗಿದೆ.

ರಾಜಸ್ಥಾನದಲ್ಲಿ ಮೂರು ವರ್ಷಕ್ಕಿಂತ ಕಡಿಮೆ ಪ್ರಾಯದ ಹೋರಿಕರುಗಳ ಮಾರಾಟ ವನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಆರು ತಿಂಗಳು ಪ್ರಾಯದ ಕರುಗಳನ್ನೂ ತ್ಯಜಿಸುವುದು ರೈತರಿಗೆ ಅನಿವಾರ್ಯವಾಗಿದೆ. ಹೀಗೆ ಬಿಡಾಡಿ ಜಾನುವಾರುಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಹೋರಿಗಳಿಗಾಗಿ ಗೋಶಾಲೆಗಳನ್ನು ಸ್ಥಾಪಿಸುವ ಸರಕಾರದ ನಿರ್ಧಾರಕ್ಕೆ ಮುಖ್ಯ ಕಾರಣವಾಗಿದೆ. ಇದರಿಂದಾಗಿ ಅವು ರೈತರ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡುವ ಪಿಡುಗು ಸ್ವಲ್ಪವಾದರೂ ತಗ್ಗಬಹುದು ಎಂದು ಸರಕಾರವು ಆಶಿಸಿದೆ.

ಸರಕಾರವು ಈಗಾಗಲೇ 2,000ಕ್ಕೂ ಅಧಿಕ ಗೋಶಾಲೆಗಳನ್ನು ಸ್ಥಾಪಿಸಿದ್ದು, ಅವುಗಳ ನಿರ್ವಹಣೆಗಾಗಿ ಪ್ರತಿವರ್ಷ ಅನುದಾನಗಳ ರೂಪದಲ್ಲಿ 193 ಕೋ.ರೂ.ಗಳನ್ನು ವ್ಯಯಿಸುತ್ತಿದೆ. ಗೋ ಕಲ್ಯಾಣ ಇಲಾಖೆಯ ಹೇಳಿಕೆಯಂತೆ ರಾಜ್ಯಾದ್ಯಂತ ಗೋಶಾಲೆ ಗಳಲ್ಲಿ ಈಗಾಗಲೇ ಎಂಟು ಲಕ್ಷಕ್ಕೂ ಅಧಿಕ ಜಾನುವಾರುಗಳಿದ್ದು, ಇವುಗಳ ಸಂಖ್ಯೆ ಪ್ರತಿವರ್ಷ ಎರಡು ಲಕ್ಷದಷ್ಟು ಹೆಚ್ಚುತ್ತಿದೆ. ಗೋಶಾಲೆಗಳಲ್ಲಿ ಆಶ್ರಯ ದೊರೆಯುವವರೆಗೂ ಬಿಡಾಡಿ ಜಾನುವಾರುಗಳು ರೈತರ ಪಾಲಿಗೆ ತಲೆನೋವಾಗಿವೆ.

ರಾಜಸ್ಥಾನದಲ್ಲಿ 1.33 ಕೋ.ಜಾನುವಾರುಗಳಿದ್ದು, ದೇಶದಲ್ಲಿ ಐದನೇ ಸ್ಥಾನದಲ್ಲಿದೆ. ಈ ಪೈಕಿ ಹೋರಿಗಳು ಮತ್ತು ಎತ್ತುಗಳ ಸಂಖ್ಯೆ ಮೂರನೇ ಒಂದರಷ್ಟಿದೆ. ರಾಜ್ಯದ ಕಾನೂನಿನಂತೆ ಜಿಲ್ಲಾ ಅಧಿಕಾರಿಗಳ ಅನುಮತಿಯಿಲ್ಲದೆ ಗೋವುಗಳನ್ನು ರಾಜ್ಯದ ಹೊರಗೆ ಸಾಗಿಸುವಂತಿಲ್ಲ. ಹೆಚ್ಚಾಗಿ ಬರಗಾಲಗಳಲ್ಲಿ ತಮ್ಮ ಆರ್ಥಿಕ ಸಂಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಲು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದ ರೈತರೀಗ ಕೊಳ್ಳುವವರಿಲ್ಲದೆ ತಲೆಯ ಮೇಲೆ ಕೈ ಹೊತ್ತಿದ್ದಾರೆ.

ಖರೀದಿದಾರರಲ್ಲಿ ಭೀತಿ ಮನೆ ಮಾಡಿರುವುದರಿಂದ ಗೋವುಗಳು ಮತ್ತು ಹೋರಿಗಳು ಮಾರಾಟವಾಗುತ್ತಿಲ್ಲ. ಅವರು ಜಾನುವಾರುಗಳನ್ನು ಸಾಗಿಸುತ್ತಿರುವುದು ಗೊತ್ತಾದರೆ ಹೆದ್ದಾರಿಗಳಲ್ಲಿ ಅವರ ಮೇಲೆ ಗೋರಕ್ಷಕರು ದಾಳಿಗಳನ್ನು ನಡೆಸುತ್ತಾರೆ ಎಂದು ರೈತ ಬೆಹ್ರುಲಾಲ ಯಾದವ್ ಹೇಳಿದರು.

ಬಿಡಾಡಿ ಜಾನುವಾರುಗಳು ಹೆಚ್ಚಿರುವುದಕ್ಕೆ ಗೋರಕ್ಷಕರನ್ನೇ ದೂರುವಂತಿಲ್ಲ. ಯಾಂತ್ರೀಕರಣದ ಬಳಿಕ ಹೋರಿಗಳು ಮತ್ತು ಎತ್ತುಗಳನ್ನು ಕೇಳುವವರೇ ಇಲ್ಲ. ಅವುಗಳನ್ನು ಬೀದಿಗಳಲ್ಲಿ ಬಿಡಲಾಗುತ್ತಿದೆ ಮತ್ತು ಅವು ರೈತರಿಗೆ ತೊಂದರೆಯನ್ನು ನೀಡುತ್ತಿವೆ. ಹೀಗಾಗಿಯೇ ನಂದಿ ಗೋಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಕೃಷಿ ಸಚಿವ ಪ್ರಭುಲಾಲ ಸೈನಿ ಅವರು ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News