ಪ್ರಧಾನಿ ಮೋದಿಗೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸ್ವಾಗತ, ಯಡಿಯೂರಪ್ಪ ಗೈರು

Update: 2018-02-19 05:27 GMT

ಮೈಸೂರು, ಫೆ.19: ಪ್ರಧಾನಮಂತ್ರಿ ನರೇಂದ್ರ ಮೋದಿ ರವಿವಾರ ರಾತ್ರಿ ಮೈಸೂರಿಗೆ ಆಗಮಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲು ಹೊದಿಸಿ ಪ್ರಧಾನಿಯನ್ನು ಸಾಂಸ್ಕೃತಿಕ ನಗರಿಗೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಡಿಜಿಪಿ ನೀಲಮಣಿ ರಾಜು, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದ ಗೌಡ, ಬಿಜೆಪಿಯ ಇತರ ನಾಯಕರು ಹಾಜರಿದ್ದು, ಶಾಲು ಹೊದಿಸಿ, ಹೂ ಗುಚ್ಛ ನೀಡಿ ಪ್ರಧಾನಿಯವರನ್ನು ಸ್ವಾಗತಿಸಿದ್ದರು.

ಆದರೆ. ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಪ್ರಧಾನಿ ಮೈಸೂರಿನಲ್ಲಿ ಇದ್ದರೂ ಇಲ್ಲಿಗೆ ಬಾರದ ಬಿಎಸ್ ಯಡಿಯೂರಪ್ಪ ಬಗ್ಗೆ ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ.

ತವರು ಜಿಲ್ಲೆ ಶಿವಮೊಗ್ಗದಲ್ಲಿ ಸೋಮವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮಿಸಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಸದ ಯಡಿಯೂರಪ್ಪ ಅಲ್ಲೇ ಠಿಕಾಣಿ ಹೂಡಿದ್ದಾರೆ ಎನ್ನಲಾಗಿದೆ.

ಸೋಮವಾರ ಸಿಗಂದೂರು ಸೇತುವೆ ಶಂಕುಸ್ಥಾಪನೆ ಕಾರ್ಯಕ್ರಮವಿದೆ. ಒಂದೇ ದಿನ ಎರಡು ಕಾರ್ಯಕ್ರಮವಿರುವ ಕಾರಣ ಯಡಿಯೂರಪ್ಪ ಮಧ್ಯಾಹ್ನ ವೇಳೆಗೆ ಮೈಸೂರಿಗೆ ಆಗಮಿಸುವ ಸಾಧ್ಯತೆಯಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News