ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಿಯಾ ಪ್ರಕಾಶ್ ವಾರಿಯರ್

Update: 2018-02-20 06:18 GMT

ಹೊಸದಿಲ್ಲಿ, ಫೆ.20: ಇನ್ನಷ್ಟೇ ತೆರೆ ಕಾಣಬೇಕಾಗಿರುವ ಮಲಯಾಳಂ ಚಿತ್ರ `ಒರು ಅಡಾರ್ ಲವ್' ಇದರ 'ಮಾಣಿಕ್ಯ ಮಲರಾಯ ಪೂವೆ' ಹಾಡಿನ ಮೂಲಕ ಪ್ರಸಿದ್ಧಿಯಾದ ಪ್ರಿಯಾ ಪ್ರಕಾಶ್ ವಾರಿಯರ್, ಈ ಹಾಡಿನಿಂದ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂಬ ಆರೋಪದ ಮೇಲೆ ತನ್ನ ಮೇಲೆ ದಾಖಲಾಗಿರುವ ಎಫ್‍ಐಆರ್ ಗಳನ್ನು ರದ್ದುಪಡಿಸುವಂತೆ ಕೋರಿ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದಾರೆ.

ಈ ಹಾಡು ಕೇವಲ 10 ದಿನಗಳಲ್ಲಿ 3.4 ಕೋಟಿ ವೀಕ್ಷಕರ ಗಮನ ಸೆಳೆದಿದ್ದರೂ ಹೈದರಾಬಾದ್ ನಗರದಲ್ಲಿ ಪ್ರಿಯಾ ಪ್ರಕಾಶ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ  ನೋವುಂಟು ಮಾಡಿದ ಆರೋಪದ ಮೇಲೆ ಪ್ರಕರಣವೊಂದು ದಾಖಲಾಗಿತ್ತು.

ಇದರ ಬೆನ್ನಿಗೆ ಮುಂಬೈಯಲ್ಲಿ ರಾಝಾ ಅಕಾಡಮಿ ಕಾರ್ಯದರ್ಶಿ ಹಾಗೂ ಮಹಾರಾಷ್ಟ್ರದ ಔರಂಗಾಬಾದ್ ನ ಜಿನ್ಸಿ ಠಾಣೆಯಲ್ಲಿ ಜನಜಾಗರಣ್ ಸಮಿತಿ ಆಕೆಯ ವಿರುದ್ಧ ದೂರು ದಾಖಲಿಸಿದ್ದವು. ಈ ಬೆಳವಣಿಗೆಗಳ ನಂತರ ಪ್ರಿಯಾ, ಚಿತ್ರ ನಿರ್ದೇಶಕ ಉಮರ್ ಅಬ್ದುಲ್ ವಹಾಬ್ ಹಾಗೂ ನಿರ್ಮಾಪಕ ಜೋಸೆಫ್ ವಲಕುಳಿ ಈಪನ್ ತಮ್ಮ ವಕೀಲರಾದ ಹಾರಿಸ್ ಬೀರನ್ ಮುಖಾಂತರ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದಾರೆ. ಸಂವಿಧಾನದಲ್ಲಿ ಅಡಕವಾಗಿರುವ ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿರುವ ಅವರು ತಮ್ಮ ವಿರುದ್ಧದ ಎಫ್‍ಐಆರ್  ರದ್ದುಗೊಳಿಸುವಂತೆ ಕೋರಿದ್ದಾರೆ.

ಚಿತ್ರದ ಈ ನಿರ್ದಿಷ್ಟ ಹಾಡು ಕೇರಳದ ಮಲಬಾರ್ ಪ್ರಾಂತ್ಯದ  ಒಂದು ಮುಸ್ಲಿಂ ಜನಪದ ಗೀತೆಯಾಗಿದ್ದು, ಪಿಎಂಎ ಜಬ್ಬಾರ್ ಅವರು 1978ರಲ್ಲಿ ರಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News