ಪಂಜಾಬ್ ಬ್ಯಾಂಕ್ ವಂಚನೆ: ಆರೋಪ ನಿರಾಕರಿಸಿದ ನೀರವ್ ಮೋದಿ

Update: 2018-02-20 15:41 GMT

ಹೊಸದಿಲ್ಲಿ, ಫೆ. 20: ದೇಶದ ಅತಿ ದೊಡ್ಡ ಬ್ಯಾಂಕ್ ವಂಚನೆಯ ಪ್ರಮುಖ ಆರೋಪಿ ವಜ್ರೋದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಆರೋಪವನ್ನು ನಿರಾಕರಿಸಿದ್ದಾರೆ ಎಂದು ಅವರ ವಕೀಲ ಮಂಗಳವಾರ ಹೇಳಿದ್ದಾರೆ. ಇಬ್ಬರು ಬ್ಯಾಂಕ್ ಅಧಿಕಾರಿಗಳು ಪೂರೈಸಿದ ‘ಸುಳ್ಳು ಖಾತರಿ’ ಬಳಸಿ 2011ರಿಂದ 2017ರ ನಡುವೆ ಸುಮಾರು 11,300 ಕೋ. ರೂ. ಸಾಲವನ್ನು ಮೋದಿ ಹಾಗೂ ಅವರ ಮಾವನಿಗೆ ಸಂಬಂಧಿಸಿದ ಕಂಪೆನಿ ಪಡೆದು ವಂಚಿಸಿರುವ ಬಗ್ಗೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ದಾಖಲಿಸಿದ ದೂರನ್ನು ಉಲ್ಲೇಖಿಸಿ ನೀರವ್ ಮೋದಿ ಅವರ ವಕೀಲ ವಿಜಯ್ ಅಗರ್‌ವಾಲ್, ‘‘ಇದರಲ್ಲಿ ಏನೂ ಇಲ್ಲ.’’ ಎಂದು ಹೇಳಿದ್ದಾರೆ. ಅಗರ್‌ವಾಲ್ ದೂರವಾಣಿಯಲ್ಲಿ ಮಾತನಾಡಿ ನೀರವ್ ಮೋದಿ ಅವರ ಮೇಲಿನ ಆರೋಪ ನಿರಾಕರಿಸಿದ್ದಾರೆ. ಪ್ರಕರಣ ದಾಖಲಿಸುವ ಮುನ್ನ ಜನವರಿಯಲ್ಲಿ ದೇಶ ತ್ಯಜಿಸಿದ್ದಾರೆ ಎಂದು ಪೊಲೀಸರು ಹೇಳಿರುವ ಮೋದಿ ಹಾಗೂ ಅವರ ಕುಟುಂಬದ ಪತ್ತೆ ಕಾರ್ಯದಲ್ಲಿ ಭಾರತೀಯ ಅಧಿಕಾರಿಗಳು ತೊಡಗಿದ್ದಾರೆ.

ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಪ್ರತಿಯೊಂದು ವ್ಯವಹಾರವನ್ನು ಕೂಡ ದಾಖಲಿಸಲಾಗಿದೆ. ಜ್ಯುವೆಲ್ಲರ್ ಕಂಪೆನಿಯೊಂದಿಗೆ ತನ್ನ ವ್ಯವಹಾರಕ್ಕೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ನಿಯಮಿತವಾಗಿ ತೆರಿಗೆ ಹಾಕುತ್ತಿತ್ತು ಎದು ಅಗರ್‌ವಾಲ್ ಹೇಳಿದ್ದಾರೆ. ಕಾನೂನು ಕಾರ್ಯತಂತ್ರದ ಬಗ್ಗೆ ಪ್ರಶ್ನಿಸಿದಾಗ ಅಗರ್‌ವಾಲ್, ‘‘ಆರೋಪ ಪಟ್ಟಿ ದಾಖಲಿಸುವ ವರೆಗೆ ಯಾವುದೇ ಕಾರ್ಯತಂತ್ರ ಇಲ್ಲ. ಆರೋಪ ಪಟ್ಟಿ ದಾಖಲಿಸಿದ ಕೂಡಲೇ ಕಾರ್ಯತಂತ್ರ ಆರಂಭಿಲಾಗುವುದು’’ ಎಂದಿದ್ದಾರೆ.

ಫೆ. 24ಕ್ಕೆ ಸುಪ್ರೀಂ ವಿಚಾರಣೆ

 ವಜ್ರೋದ್ಯಮಿ ನೀರವ್ ಮೋದಿ ಹಾಗೂ ಇತರರು ಭಾಗಿಯಾಗಿರುವ 11,300 ಕೋ. ರೂ. ವಂಚನೆಯಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಉನ್ನತ ಆಡಳಿತ ವರ್ಗದ ಪಾತ್ರದ ಬಗ್ಗೆ ತನಿಖೆ ನಡೆಸಲು ಆಗ್ರಹಿಸಿ ಸಲ್ಲಿಸಲಾದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಡೆಸಲಿದೆ. ನ್ಯಾಯವಾದಿ ವಿನೀತ್ ಧಾಂಡಾ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಮಂಗಳವಾರ ಒಪ್ಪಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News