ವಿಜಯ್ ಮಲ್ಯ, ನೀರವ್ ಮೋದಿಯನ್ನು ಭಾರತಕ್ಕೆ ಕರೆತರಲು ಬೇಕಾದ ವೆಚ್ಚ ಕೋರಿ ಆರ್ ಟಿಐ ಅರ್ಜಿ

Update: 2018-02-20 16:06 GMT

ಹೊಸದಿಲ್ಲಿ, ಫೆ. 20: ದೇಶ ಭ್ರಷ್ಟ ಉದ್ಯಮಿಗಳಾದ ನೀರವ್ ಮೋದಿ ಹಾಗೂ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆ ತರಲು ಆಗುವ ವೆಚ್ಚದ ವಿವರ ನೀಡಲು ಸಿಬಿಐ ನಿರಾಕರಿಸಿದೆ.

 ಪುಣೆ ಮೂಲದ ಸಾಮಾಜಿಕ ಹೋರಾಟಗಾರ ವಿಹಾರ್ ಧುರ್ವೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಈ ಮಾಹಿತಿ ಕೋರಿದ್ದರು. ಭಾರತಕ್ಕೆ ಬೇಕಾಗಿರುವ, 9000 ಕೋ. ರೂ. ವಂಚನೆ ಎಸಗಿದ ಆರೋಪಕ್ಕೆ ಒಳಗಾಗಿರುವ ವಿಜಯ್ ಮಲ್ಯ ಹಾಗೂ ಹಣ ವಂಚಿಸಿದ ಆರೋಪಕ್ಕೆ ಒಳಗಾಗಿರುವ ನೀರವ್ ಮೋದಿಯನ್ನು ಭಾರತಕ್ಕೆ ಹಿಂದೆ ಕರೆ ತರಲು ಬೇಕಾದ ವೆಚ್ಚದ ವಿವರ ನೀಡುವಂತೆ ಕೋರಿ ವಿಹಾರ್ ಧುರ್ವೆ ಸಿಬಿಐಯನ್ನು ಸಂಪರ್ಕಿಸಿದ್ದರು.

 ಮಲ್ಯರ ವಿರುದ್ಧ ಸಿಬಿಐ ಲುಕೌಟ್ ನೋಟಿಸ್ ಜಾರಿಗೊಳಿಸಿದ ಬಳಿಕ 2016 ಮಾರ್ಚ್‌ನಲ್ಲಿ ಮಲ್ಯ ಭಾರತದಿಂದ ಪರಾರಿಯಾಗಿದ್ದಾರೆ. ಮದ್ಯದ ಉದ್ಯಮಿಯ ಗಡಿಪಾರು ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಹಲವು ಬಾರಿ ತನ್ನ ತಂಡವನ್ನು ಲಂಡನ್‌ಗೆ ಕಳುಹಿಸಿತ್ತು.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹಣಕಾಸು ಸಚಿವಾಲಯ ಸಿಬಿಐಗೆ ರವಾನಿಸಿತ್ತು. ಸಿಬಿಐ ಈ ಅರ್ಜಿಯನ್ನು ಈ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಕಳುಹಿಸಿಕೊಟ್ಟಿತ್ತು.

 2011ರ ಸರಕಾರಿ ಅಧಿಸೂಚನೆಯಂತೆ ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಈ ಬಗ್ಗೆ ಮಾಹಿತಿ ಬಹಿರಂಗಗೊಳಿಸುವುದಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಸಿಬಿಐ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯೆ ನೀಡಿದೆ.ಮಾಹಿತಿ ಹಕ್ಕು ಕಾಯ್ದೆಯ ಕಲಂ 24ರ ಅನ್ವಯ ಪಾರದರ್ಶಕ ಕಾನೂನು ಅಡಿಯಲ್ಲಿ ಕೆಲವು ಸಂಸ್ಥೆಗಳಿಗೆ ವಿನಾಯತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News