ದೆಹಲಿ: ಬೃಹತ್ ವೈದ್ಯಕೀಯ ವಂಚನೆ ಬೆಳಕಿಗೆ

Update: 2018-02-21 03:36 GMT

ಹೊಸದಿಲ್ಲಿ, ಫೆ. 21: ದೆಹಲಿಯ ನಾಲ್ಕು ಆಸ್ಪತ್ರೆಗಳು ರೋಗಿಗಳಿಗೆ ಮಾರುಕಟ್ಟೆ ದರದ ಶೇಕಡ 1192 ರಷ್ಟು ಅಧಿಕ ದರದಲ್ಲಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ಜಾಲ ಬಹಿರಂಗವಾಗಿದೆ. ಈ ನಾಲ್ಕು ಆಸ್ಪತ್ರೆಗಳ ವಿರುದ್ಧದ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಔಷಧಗಳ ಬೆಲೆ ನಿಗದಿ ಪ್ರಾಧಿಕಾರ, ಬಿಲ್‌ಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಆರೋಪ ದೃಢಪಟ್ಟಿದೆ.

ದೇಶದ ಔಷಧ ನಿಯಂತ್ರಕ ಸಂಸ್ಥೆಯ ಈ ವಿಶ್ಲೇಷಣಾ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದ್ದು, ಹೊಸದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದ ನಾಲ್ಕು ಆಸ್ಪತ್ರೆಗಳು ಈ ಅಕ್ರಮ ಎಸಗಿರುವುದು ದೃಢಪಟ್ಟಿದೆ. ಔಷಧ ಅಥವಾ ವೈದ್ಯಕೀಯ ಸಾಧನಗಳ ಉತ್ಪಾದಕ ಕಂಪನಿಗಳಿಗಿಂತ ಹೆಚ್ಚಾಗಿ ಈ ಅಧಿಕ ದರ ವಿಧಿಸಿದ ಲಾಭವನ್ನು ಆಸ್ಪತ್ರೆಗಳು ಪಡೆದುಕೊಂಡಿವೆ ಎಂದು ವರದಿ ಸ್ಪಷ್ಟಪಡಿಸಿದೆ.

ಸಾಮಾನ್ಯವಾಗಿ ಆಸ್ಪತ್ರೆಯ ಒಟ್ಟು ವೆಚ್ಚದ ಶೇಕಡ 15ಕ್ಕಿಂತ ಹೆಚ್ಚು ವೆಚ್ಚ ಔಷಧಗಳಿಗೆ ಆಗುತ್ತಿದ್ದು, ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ಖರೀದಿಸುವುದು ಹೆಚ್ಚು ವೆಚ್ಚದಾಯಕ. ಆರಂಭಿಕ ಅಂದಾಜಿಗಿಂತ ನಾಲ್ಕು ಪಟ್ಟು ಅಧಿಕ ವೆಚ್ಚವಾಗುತ್ತಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದು ರೋಗಿಗಳು ದೂರು ನೀಡಿದ್ದರು.

ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ, ಗರಿಷ್ಠ ಮಾರಾಟ ಬೆಲೆಯನ್ನು ಅಧಿಕವಾಗಿ ಮುದ್ರಿಸುವಂತೆ ಉತ್ಪಾದನಾ ಕಂಪನಿಗಳಿಗೆ ಸೂಚಿಸಿ, ಸಗಟು ಖರೀದಿ ಆದೇಶ ನೀಡಲಾಗುತ್ತಿತ್ತು ಎಂದು ಎನ್‌ಪಿಪಿಎ ವರದಿ ಹೇಳಿದೆ. ಈ ಲಾಭಕೋರ ನೀತಿಗೆ ಪೂರಕವಾಗಿ ಆಸ್ಪತ್ರೆಯ ವೈದ್ಯರು ಅನುಬಂಧದಲ್ಲಿ ಇರುವ ಔಷಧಗಳ ಬದಲಾಗಿ ಅನುಬಂಧದಲ್ಲಿ ಇಲ್ಲದ ಔಷಧಿಗಳನ್ನು ಶಿಫಾರಸ್ಸು ಮಾಡುತ್ತಿರುವುದನ್ನೂ ವರದಿ ಬಹಿರಂಗಪಡಿಸಿದೆ. ಆದರೆ ಆಸ್ಪತ್ರೆಗಳ ಹೆಸರನ್ನು ಎನ್‌ಪಿಪಿಎ ಬಹಿರಂಗಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News