ಮಡಿಕೇರಿ: ಫೆ.23 ರಿಂದ ಗಾಂಧಿ ಮೈದಾನದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ

Update: 2018-02-21 13:43 GMT

ಮಡಿಕೇರಿ,ಫೆ.21: ವಿರಾಜಪೇಟೆ ತಾಲೂಕಿನ ಹೆಬ್ಬಾಲೆ ದೇವರಪುರ ಗ್ರಾಮದಲ್ಲಿರುವ ಪರಿಶಿಷ್ಟ ಪಂಗಡದ ಸುಮಾರು 150 ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿ ಫೆ.23 ರಿಂದ ನಗರದ ಗಾಂಧಿ ಮೈದಾನದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ದಲಿತ ಸಂಘರ್ಷ ಸಮಿತಿ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ವಿಭಾಗೀಯ ಸಂಚಾಲಕರಾದ ಹೆಚ್.ಎಸ್.ಕೃಷ್ಣಪ್ಪ ಸ್ವಾತಂತ್ರ್ಯ ಪೂರ್ವದಿಂದಲೂ ಗ್ರಾಮದ ಸರ್ವೆ ಸಂ.8/1 ಹಾಗೂ 8/2 ರಲ್ಲಿ ವಾಸಿಸುತ್ತಿರುವ ದುರ್ಬಲರು ಕೃಷಿ ಕಾರ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಪ್ರದೇಶದಲ್ಲಿ 150 ಕ್ಕೂ ಹೆಚ್ಚಿನ ಕುಟುಂಬಗಳು ವಾಸಿಸುತ್ತಿದ್ದರೂ ಇಲ್ಲಿಯವರೆಗೆ ಸರಕಾರ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡಿಲ್ಲವೆಂದು ಆರೋಪಿಸಿದರು. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಖಂಡಿಸಿ ಫೆ.23 ರಿಂದ ಧರಣಿ ಸತ್ಯಾಗ್ರಹ ಆರಂಭಿಸುತ್ತಿದ್ದು, ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರೆಲಿದೆ ಎಂದರು.

ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್.ಆರ್.ಪರಶುರಾಮ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದಿದ್ದರೂ ಜಿಲ್ಲಾಡಳಿತಕ್ಕೆ ಕನಿಷ್ಠ ಕುಡಿಯುವ ನೀರನ್ನು ನೀಡಲು ಸಾಧ್ಯವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಅನೇಕ ವರ್ಷಗಳಿಂದ ಈ ಹಾಡಿ ನಿವಾಸಿಗಳ ಸಂಕಷ್ಟದ ಬದುಕನ್ನು ಪ್ರತಿಭಟನೆಗಳ ಮೂಲಕ ಆಳುವವರ ಗಮನ ಸೆಳೆಯಲಾಗಿದೆ. ಆದರೆ ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಮಾತ್ರ ದುರ್ಬಲರನ್ನು ಬಳಸಿಕೊಳ್ಳುತ್ತಿರುವ ಜನಪ್ರತಿನಿಧಿಗಳು ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್‍ಗಳಿದ್ದರೂ ಮೂಲಭೂತ ಸೌಲಭ್ಯ ನೀಡುತ್ತಿಲ್ಲವೆಂದು ಆರೋಪಿಸಿದರು. 

ರಸ್ತೆಯ ಕೊರತೆ ಹಾಗೂ ವನ್ಯಜೀವಿಗಳ ದಾಳಿಗೆ ಭಯಗೊಂಡು ಸುಮಾರು 90 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇತ್ತೀಚೆಗೆ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾಳೆ. ಇಲ್ಲಿನ ನಿವಾಸಿಗಳನ್ನು ಅನೇಕ ಸಮಸ್ಯೆಗಳು ಕಾಡುತ್ತಿದ್ದರೂ ಕಳೆದ 10 ವರ್ಷಗಳಿಂದ ನ್ಯಾಯಾಲಯದ ನೆಪ ಹೇಳಿ ಮೂಲಭೂತ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಲಾಗಿದೆ. ಬಡವರು ವಾಸಿಸುತ್ತಿರುವ ಪ್ರದೇಶವನ್ನು ದೇವರಕಾಡು ಎಂದು ಹೇಳಿಕೊಂಡು ಕೆಲವರು ದೇವಾಲಯ ಸಮಿತಿಯನ್ನು ರಚಿಸಿದ ನಂತರ ಅಡ್ಡಿ ಆತಂಕಗಳು ಎದುರಾಗಿದೆ ಎಂದು ಪರಶುರಾಮ್ ಆರೋಪಿಸಿದರು.

ದೇವಾಲಯ ಸಮಿತಿ ಪ್ರಕರಣದ ಕುರಿತು ನ್ಯಾಯಾಲಯದ ಮೆಟ್ಟಿಲೇರಿದ್ದು, ಅತಂತ್ರ ಸ್ಥಿತಿಯಲ್ಲಿ ವಾಸಿಸುತ್ತಿರುವ ಬಡವರ ಪರ ಕಾನೂನು ಹೋರಾಟ ನಡೆಸಬೇಕಾದ ಸರಕಾರ ಮೌನಕ್ಕೆ ಶರಣಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಇಲ್ಲಿರುವ 150 ಕುಟುಂಬಗಳು ಸುಮಾರು 30-35 ಎಕರೆ ಪ್ರದೇಶದಲ್ಲಿ ಮಾತ್ರ ಜೀವನ ಸಾಗಿಸುತ್ತಿದ್ದು, ಸುತ್ತಮುತ್ತಲಿನ 150 ಎಕರೆಗೂ ಅಧಿಕ ಭೂಮಿಯನ್ನು ಉಳ್ಳವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಪರಶುರಾಮ್, ಜಿಲ್ಲಾಡಳಿತ ತಕ್ಷಣ ಎಲ್ಲಾ ಜಮೀನಿನ ಸರ್ವೆ ಕಾರ್ಯ ನಡೆಸಿ ದೇವರಕಾಡನ್ನು ಗುರುತಿಸಬೇಕೆಂದು ಒತ್ತಾಯಿಸಿದರು.  

ಪರಿಶಿಷ್ಟ ಪಂಗಡದ ನಿವಾಸಿಗಳನ್ನು ಈ ಪ್ರದೇಶದಿಂದ ತೆರವುಗೊಳಿಸಲು ಮುಂದಾದರೆ ಉಳ್ಳವರನ್ನು ಕೂಡ ಒತ್ತುವರಿ ಜಮೀನಿನಿಂದ ತೆರವುಗೊಳಿಸುವಂತೆ ಒತ್ತಾಯಿಸಿ ಹೋರಾಟ ನಡೆಸುವುದಾಗಿ ಪರಶುರಾಮ್ ಎಚ್ಚರಿಕೆ ನೀಡಿದರು.

ಫೆ.23 ರಿಂದ ಆರಂಭಗೊಳ್ಳುವ ಅಹೋರಾತ್ರಿ ಧರಣಿಗೂ ಮೊದಲು ನಗರದ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಧರಣಿಯಲ್ಲಿ ಸುಮಾರು 400 ಮಂದಿ ಪಾಲ್ಗೊಳ್ಳುತ್ತಿದ್ದು, ಪ್ರತಿದಿನ 50 ರಿಂದ 60 ಮಂದಿ ಧರಣಿ ಸ್ಥಳದಲ್ಲಿ ತಂಗಲಿದ್ದಾರೆ ಎಂದರು. 

ಚುನಾವಣೆ ಸಂದರ್ಭ ಬಾಡೂಟದ ಆಮಿಷವೊಡ್ಡುವವರನ್ನು ಬಹಿಷ್ಕರಿಸುವುದಾಗಿ ತಿಳಿಸಿದ ಪರಶುರಾಮ್ ನಮ್ಮ ಬೇಡಿಕೆ ಈಡೇರಿಸುವವರಿಗೆ ಮಾತ್ರ ನಮ್ಮ ಬೆಂಬಲವೆಂದು ಸ್ಪಷ್ಟಪಡಿಸಿದರು. ಜಿಲ್ಲಾಧಿಕಾರಿಗಳು ಲಿಖಿತ ರೂಪದಲ್ಲಿ ಭರವಸೆ ನೀಡುವಲ್ಲಿಯವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಅವರು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಂಚಾಲಕರಾದ ಬಿ.ಆರ್.ರಜನಿಕಾಂತ್, ಪಿ.ಜೆ.ಸುಬ್ರಮಣಿ, ವಿರಾಜಪೇಟೆ ತಾಲ್ಲೂಕು ಸಂಚಾಲಕರಾದ ಹೆಚ್.ಎಲ್.ಕುಮಾರ್ ಹಾಗೂ ಸಂಘಟನಾ ಸಂಚಾಲಕರಾದ ಉಣ್ಣಿಕೃಷ್ಣ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News