ಪಿಎನ್‌ಬಿ ವಂಚನೆ: ಮುಂದುವರಿದ ನಕಲಿ ಸಂಸ್ಥೆಗಳ ಬೇಟೆ

Update: 2018-02-21 14:30 GMT

ಹೊಸದಿಲ್ಲಿ, ಫೆ.21: ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಏಳನೇ ದಿನವೂ ದಾಳಿಯನ್ನು ಮುಂದುವರಿಸಿದ್ದು ಮುಂಬೈಯ ಮೂರು ನಕಲಿ ಕಂಪೆನಿಗಳು ಸೇರಿದಂತೆ ದೇಶಾದ್ಯಂತ 17 ಸ್ಥಳಗಳಲ್ಲಿ ದಾಳಿ ನಡೆಸಿದೆ.

ವಜ್ರಾಭರಣ ತಯಾರಕ ನೀರವ್ ಮೋದಿ ಹಾಗೂ ಗೀತಾಂಜಲಿ ಜೆಮ್ಸ್‌ನ ಮಾಲಕ ಮೆಹುಲ್ ಚೋಕ್ಸಿಯ ವ್ಯವಹಾರದ ಜೊತೆ ಸಂಬಂಧ ಹೊಂದಿರುವ ನಕಲಿ ಕಂಪೆನಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಮುಂಬೈಯ ಒಪೆರಾ ಹೌಸ್, ಪೆದ್ದರ್ ರಸ್ತೆ, ಗೋರೆಗಾಂವ್(ಪೂ) ಹಾಗೂ ಪೊವೈ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿದ್ದ ನಕಲಿ ಸಂಸ್ಥೆಗಳು ಸೇರಿದಂತೆ ದೇಶಾದ್ಯಂತ 17 ನಕಲಿ ಕಂಪೆನಿಗಳ ಮೇಲೆ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರದಂದು ಆದಾಯ ತೆರಿಗೆ ಇಲಾಖೆಯು ಆರೋಪಿಗಳು ಹಣ ವಂಚಿಸಲು ಮತ್ತು ತೆರಿಗೆ ಕಳ್ಳತನಕ್ಕಾಗಿ ಬಳಸಿದ್ದ ನಕಲಿ ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು. 11,400 ಕೋಟಿ ರೂ. ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 200 ನಕಲಿ ಸಂಸ್ಥೆಗಳ ಮತ್ತು ಬೇನಾಮಿ ಆಸ್ತಿಗಳ ಮೇಲೆ ತನಿಖಾ ಸಂಸ್ಥೆಗಳು ಕಣ್ಣಿಟ್ಟಿವೆ ಎಂದು ಈ ಹಿಂದೆಯೇ ಮಾಧ್ಯಮಗಳು ವರದಿ ಮಾಡಿದ್ದವು. ತನಿಖಾ ಸಂಸ್ಥೆಯು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿ 5,727 ಕೋಟಿ ರೂ. ಮೌಲ್ಯದ ವಜ್ರ, ಚಿನ್ನದ ಆಭರಣ ಮತ್ತು ಇತರ ಅಮೂಲ್ಯ ರತ್ನಗಳನ್ನು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News