ಪಿ.ಎನ್.ಬಿ. ಹಗರಣ:ವಂಚನೆಯ ಎಲ್‌ಒಯುಗಳ ಬಗ್ಗೆ ಅಂಬಾನಿ ಸೋದರಳಿಯ ವಿಪುಲ್ ಅಂಬಾನಿಗೆ ಮೊದಲೇ ತಿಳಿದಿತ್ತು; ಸಿಬಿಐ

Update: 2018-02-22 07:15 GMT

ಮುಂಬೈ, ಫೆ.22: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿ.ಎನ್.ಬಿ.)ಗೆ ರೂ.11,400 ಕೋಟಿ ವಂಚಿಸಿ ದೇಶ ಬಿಟ್ಟು ತೆರಳಿರುವ ವಜ್ರೋದ್ಯಮಿ ನೀರವ್ ಮೋದಿಯ ಸಹವರ್ತಿ, ಈಗ ಬಂಧನದಲ್ಲಿರವ ವಿಪುಲ್ ಅಂಬಾನಿಗೆ ಬ್ಯಾಂಕಿಗೆ ನೀಡಲಾಗಿದ್ದ ಹಾಗೂ ವಂಚನೆಯ ಉದ್ದೇಶ ಹೊಂದಿದ್ದ ಲೆಟರ್ಸ್‌ ಆಫ್ ಅಂಡರ್ ಟೇಕಿಂಗ್(ಎಲ್‌ಒಯು) ಬಗ್ಗೆ ಗೊತ್ತಿತ್ತು ಎಂದು ಸಿಬಿಐ ಬುಧವಾರ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. 

ಈ ಎಲ್‌ಒಯುಗಳಿಗಾಗಿ ಅರ್ಜಿಗಳನ್ನು ಅಂಬಾನಿಯ ಮುಂಬೈ ಕಚೇರಿಯಲ್ಲಿ ತಯಾರಿಸಲಾಗಿತ್ತು ಎಂದೂ ಸಿಬಿಐ ಹೇಳಿದೆ. ಫೈರ್ ಸ್ಟಾರ್ ಗ್ರೂಪ್ ಆಫ್ ಕಂಪೆನೀಸ್ ಅಧ್ಯಕ್ಷರಾಗಿರುವ ವಿಪುಲ್ ಅಂಬಾನಿ ಸಹಿತ ಬಂಧಿತ ಎಲ್ಲಾ ಆರು ಮಂದಿಯನ್ನು ನ್ಯಾಯಾಲಯ ಮಾರ್ಚ್ 5ರ ತನಕ ಸಿಬಿಐ ಕಸ್ಟಡಿಗೆ ವಹಿಸಿದೆ.

ಧೀರೂಭಾಯ್ ಅಂಬಾನಿಯ ಸೋದರಳಿಯನಾಗಿರುವ ವಿಪುಲ್ ಬಂಧನ ಮಂಗಳವಾರ ನಡೆದಿತ್ತು. ಅವರು ಈ ವಂಚನೆಯಲ್ಲಿ ನೇರ ಶಾಮೀಲಾತಿ ಹೊಂದಿದ್ದಾರೆ ಹಾಗೂ ವಂಚನೆಯ ಉದ್ದೇಶ ಹೊಂದಿದ್ದ ಎಲ್‌ಒಯು ಬಗ್ಗೆ ಅವರು ತಮ್ಮ ವಿರೋಧವನ್ನು ಉದ್ದೇಶಪೂರ್ವಕವಾಗಿ ವ್ಯಕ್ತಪಡಿಸಿರಲಿಲ್ಲವೆಂದು ಹೇಳಲಾಗಿದೆ.

ಮೇ 2013ರಿಂದ ನವೆಂಬರ್ 2017ರ ತನಕ ಹಣಕಾಸು ವಿಭಾಗದ ಮುಖ್ಯಸ್ಥರಾಗಿದ್ದ ವಿಪುಲ್ ಅಂಬಾನಿಗೆ ನೀರವ್ ಮೋದಿ ಮತ್ತಿತರರ ನಿರ್ದೇಶನದಂತೆ ಈಗ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಗೋಕುಲನಾಥ ಶೆಟ್ಟಿ ಬ್ಯಾಂಕಿಗೆ ನೀಡಿದ್ದ ಲೆಟರ್ಸ್‌ ಆಫ್ ಅಂಡರ್ ಟೇಕಿಂಗ್ ಹಿಂದಿನ ತಂತ್ರಗಾರಿಕೆಗ ತಿಳಿದಿತ್ತು. ಅವರು ಪಿಎನ್‌ಬಿಯ ಬ್ರಾಡಿ ಹೌಸ್ ಶಾಖೆಯ ಅಧಿಕಾರಿಗಳನ್ನು ಮಾತ್ರವಲ್ಲದೆ, ಬ್ಯಾಂಕಿನ ಇತರ ವೃತ್ತಗಳ ಅಧಿಕಾರಿಗಳನ್ನೂ ಭೇಟಿಯಾಗುತ್ತಿದ್ದರು. ಅವರ ಕಚೇರಿಗೆ ದಾಳಿ ನಡೆಸಿದಾಗ ಎಲ್‌ಒಯುಗಳಿಗಾಗಿ ಸಲ್ಲಿಸಿದ ಅರ್ಜಿಗಳು ದೊರೆತಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News