ಸೂಕ್ತ ಕ್ರಮದ ಬಗ್ಗೆ ಭರವಸೆ ನೀಡಿದ ಜಸ್ಟಿನ್ ಟ್ರೂಡೊ

Update: 2018-02-22 14:37 GMT

ಹೊಸದಿಲ್ಲಿ, ಫೆ.22: ಭಾರತ ಭೇಟಿಯಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಮುಂಬೈ ಮತ್ತು ದಿಲ್ಲಿಯ ಕಾರ್ಯಕ್ರಮಗಳಿಗೆ ಖಾಲಿಸ್ತಾನ್ ಉಗ್ರ ಜಸ್ವಾಲ್ ಅತ್ವಲ್‌ನನ್ನು ಆಹ್ವಾನಿಸಿದ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಪ್ರಧಾನಿ ಟ್ರೂಡೊ ಭರವಸೆ ನೀಡಿದ್ದಾರೆ. ಇದೊಂದು ಗಂಭೀರವಾದ ವಿಷಯ. ಖಾಲಿಸ್ತಾನ್ ಉಗ್ರನಿಗೆ ನಮ್ಮ ಕಾರ್ಯಕ್ರಮಕ್ಕೆ ಆಹ್ವಾನವನ್ನು ನೀಡಲು ಸಾಧ್ಯವಿಲ್ಲ. ಇದಕ್ಕೆ ಕಾರಣರಾದ ವ್ಯಕ್ತಿ ಮತ್ತು ಇಲಾಖೆಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟ್ರೂಡೊ ತಿಳಿಸಿದ್ದಾರೆ. ಖಾಲಿಸ್ತಾನ್ ಉಗ್ರ ಜಸ್ವಾಲ್ ಅತ್ವಲ್ ಪಂಜಾಬ್‌ನ ಸಚಿವರ ಹತ್ಯಾಯತ್ನದ ದೋಷಿಯಾಗಿದ್ದು 20 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾನೆ. ಘಟನೆಯ ಹಿನ್ನೆಲೆಯಲ್ಲಿ ಕೆನಡಾ ಹೈ ಕಮಿಷನರ್ ನಾದಿರ್ ಪಟೇಲ್, ದಿಲ್ಲಿಯಲ್ಲಿ ನಡೆಯಲಿರುವ ಔತಣಕೂಟಕ್ಕೆ ಜಸ್ವಾಲ್‌ಗೆ ಆಹ್ವಾನವನ್ನು ರದ್ದುಗೊಳಿಸಿದ್ದಾರೆ. ಮಂಗಳವಾರದಂದು ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಸ್ವಾಲ್ ಭಾಗಿಯಾಗಿದ್ದು ಕೆನಡಾ ಪ್ರಧಾನಿಯ ಪತ್ನಿ ಸೋಫಿ ಟ್ರೂಡೊ ಮತ್ತು ಕೆನಡಾದ ಸಚಿವ ಅಮರ್‌ಜೀತ್ ಸೋಹಿ ಜೊತೆ ಫೋಟೊ ಕ್ಲಿಕ್ಕಿಸಿದ್ದ. ಈ ಘಟನೆಯಿಂದ ಕೆನಡಾ ತೀವ್ರ ಮುಜುಗರಕ್ಕೀಡಾಗಿದೆ.

ಜಸ್ವಾಲ್ ಅತ್ವಲ್ ಸಿಖ್ ಪ್ರತ್ಯೇಕತಾವಾದಿಯಾಗಿದ್ದು ನಿಷೇಧಿತ ಅಂತಾರಾಷ್ಟ್ರೀಯ ಸಿಖ್ ಯುವ ಒಕ್ಕೂಟ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. 1986ರಲ್ಲಿ ವಾಂಕೋವರ್‌ನಲ್ಲಿ ಪಂಜಾಬ್ ಸಚಿವ ಮಲ್ಕೈತ್ ಸಿಂಗ್ ಸಿಧು ಹತ್ಯೆಗೆ ವಿಫಲ ಯತ್ನ ನಡೆಸಿ ಜೈಲು ಪಾಲಾಗಿದ್ದ. ಘಟನೆಯನ್ನು ಭಯೋತ್ಪಾದಕ ಕೃತ್ಯ ಎಂದು ವ್ಯಾಖ್ಯಾನಿಸಿದ ನ್ಯಾಯಾಲಯ ಆತನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಜಸ್ವಾಲ್ ಅತ್ವಲ್‌ಗೆ ಭಾರತೀಯ ವೀಸಾ ಸಿಕ್ಕಿರುವುದಾದರೂ ಹೇಗೆ ಮತ್ತು ಆತ ಕೆನಡಾ ಪ್ರಧಾನಿಯ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಾಗಿರುವುದಾದರೂ ಹೇಗೆ ಎಂಬುವುದು ಇನ್ನೂ ನಿಗೂಡವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News