ರಾಜಕಾರಣಿಗಳು ದೇವರಲ್ಲ, ಕಾನೂನಿಗಿಂತ ದೊಡ್ಡವರಲ್ಲ: ಬಾಂಬೆ ಉಚ್ಚ ನ್ಯಾಯಾಲಯ

Update: 2018-02-22 15:05 GMT

ಮುಂಬೈ, ಫೆ.22: ರಾಜಕಾರಣಿಗಳು ದೇವರಲ್ಲ ಮತ್ತು ಅವರು ಕಾನೂನಿಗಿಂತ ದೊಡ್ಡವರಲ್ಲ ಎಂದು ತಿಳಿಸಿರುವ ಬಾಂಬೆ ಉಚ್ಚ ನ್ಯಾಯಾಲಯ ಮ್ಯಾಂಗ್ರೋ ಕಾಡುಗಳನ್ನು ಅತಿಕ್ರಮಣಗೊಳಿಸಿದ ಆರೋಪ ಎದುರಿಸುತ್ತಿರುವ ಇಬ್ಬರು ಸ್ಥಳೀಯ ಕಾರ್ಪೊರೇಟರ್‌ಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ.

ಸ್ಥಳೀಯ ಕಾರ್ಪೊರೇಟರ್‌ಗಳಾದ ಬಿಜೆಪಿಯ ಪರಶುರಾಮ್ ಮಾತ್ರೆ ಮತ್ತು ಶಿವಸೇನೆಯ ಅನಿತಾ ಪಾಟಿಲ್ ವಿರುದ್ಧ ಪರಿಸರ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ನ್ಯಾಯಾಧೀಶ ಎಸ್.ಸಿ ಧರ್ಮಾಧಿಕಾರಿ ಮತ್ತು ಭಾರತಿ ದಂಗ್ರೆ ನೇತೃತ್ವದ ಪೀಠವು ಪೊಲೀಸರಿಗೆ ಸೂಚಿಸಿದೆ.

ರಾಜಕಾರಣಿಗಳು ದೇವರಲ್ಲ. ಮುನಿಸಿಪಲ್ ಕಾರ್ಪೊರೇಶನ್ ಮತ್ತು ಸ್ಥಳೀಯ ಪೊಲೀಸರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹೆದರುತ್ತಿರುವುದಾದರೂ ಯಾಕೆ?, ನೀವು ಧೈರ್ಯವಾಗಿರಬೇಕು ಮತ್ತು ಯಾರಿಗೂ ಹೆದರಬಾರದು ಎಂದು ಪೀಠವು ತಿಳಿಸಿದೆ.

 ಭರತ್ ಮೊಕವಲ್ ಎಂಬವರು ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸುತ್ತಿದ್ದ ವೇಳೆ ಪೀಠವು ಈ ಆದೇಶವನ್ನು ನೀಡಿದೆ. 2016ರ ಮಾರ್ಚ್‌ನಲ್ಲಿ ಸ್ಥಳೀಯ ತಹಶೀಲ್ದಾರರು ಉಲ್ಲೇಖಿತ ಜಮೀನಿನ ಪರಿಶೀಲನಾ ವರದಿಯನ್ನು ಸಿದ್ಧಗೊಳಿಸಿದ್ದಾರೆ. ಈ ವರದಿಯಲ್ಲಿ ತಹಶೀಲ್ದಾರರು ಇಬ್ಬರು ಕಾರ್ಪೊರೇಟರ್ ಮತ್ತು ಇತರ ನಾಲ್ವರರನ್ನು ಮ್ಯಾಂಗ್ರೊ ನಾಶ ಮತ್ತು ಅತಿಕ್ರಮಣ ಪ್ರಕರಣದ ಆರೋಪಿಗಳೆಂದು ಹೆಸರಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅರ್ಜಿದಾರರು ಸಂಬಂಧಿತ ವ್ಯಕ್ತಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರೂ, ರಾಜಕೀಯ ಪ್ರಭಾವದ ಕಾರಣದಿಂದ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ನ್ಯಾಯಾಲಯದಲ್ಲಿ ಭರತ್ ತಿಳಿಸಿದ್ದಾರೆ. ಮತ್ತೊಂದೆಡೆ, ಪರಿಸರ ರಕ್ಷಣೆ ಕಾಯ್ದೆಯ ನಿಬಂಧನೆಗಳನ್ನು ಅಧ್ಯಯನ ಮಾಡಲು ಇನ್ನಷ್ಟು ಕಾಲಾವಕಾಶದ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News