ಚಾ.ನಗರ ಬಿಜೆಪಿ ಜಿಲ್ಲಾ ಉಸ್ತುವಾರಿಗೆ ವಿ.ಸೋಮಣ್ಣ ರಾಜೀನಾಮೆ

Update: 2018-02-22 15:26 GMT

ಚಾಮರಾಜನಗರ, ಫೆ.22: ನಗರದ ಜಿಲ್ಲಾ ಬಿಜೆಪಿ ಉಸ್ತುವಾರಿಗೆ ಮಾಜಿ ಸಚಿವ ವಿ.ಸೋಮಣ್ಣ ರಾಜೀನಾಮೆ ನೀಡಿದ್ದು, ತನ್ನನ್ನು ಜಿಲ್ಲೆಯಿಂದ ಬಿಡುಗಡೆ ಮಾಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯುಡಿಯೂರಪ್ಪಅವರಿಗೆ ಎರಡು ಪುಟಗಳ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷರಾದ ತಮ್ಮ ಸೂಚನೆಯ ಮೇರೆಗೆ ತಾನು ಚಾಮರಾಜನಗರ ಜಿಲ್ಲೆ ಮತ್ತು ಹಾಸನ ಜಿಲ್ಲೆಯ ಉಸ್ತುವಾರಿಯನ್ನು ಬಹಳ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೆ. ಹಾಸನ ಜಿಲ್ಲೆಯಲ್ಲಿ ತಾನಾಗಲಿ ಜಿಲ್ಲೆಯ ಪ್ರಮುಖರಾಗಲಿ ಒಂದು ಒಡಂಬಡಿಕೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದೆ.

ಆದರೆ ಚಾಮರಾಜನಗರದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಪ್ಪ ಸುಳ್ಳನ್ನೆ ಬಂಡವಾಳವನ್ನಾಗಿ ಮಾಡಿಕೊಂಡು ಇಲ್ಲ-ಸಲ್ಲದ ಅಪಪ್ರಚಾರ ಮಾಡುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿರುವುದು ಜಗಜ್ಜಾಹೀರಾಗಿದೆ. ಫೆ.16ರಂದು ಮಧ್ಯಾಹ್ನ ತಾವು ತನ್ನನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ಸಿನಿಂದ ಗೆದ್ದು, ಜಿಪಂ ಅಧ್ಯಕ್ಷರಾಗಿದ್ದ ರಾಮಚಂದ್ರ ಅವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಸೂಚಿಸಿದ್ದಿರಿ. ಆದರೆ, ಮೈಸೂರಿನಲ್ಲಿ ನಡೆದ ಪ್ರಧಾನಮಂತ್ರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ವಿಚಾರವನ್ನು ತಮ್ಮ ಸೂಚನೆಯಂತೆ ನಿಮ್ಮ ವಿವೇಚನೆಗೆ ಬಿಡಲಾಯಿತು.

ತದನಂತರ ಅದೇ ದಿನ ಅಂದರೆ, ಫೆ.16ರಂದು ಚಾಮರಾಜನಗರ ಜಿಲ್ಲೆಯ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಅವರನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಮಾತನಾಡಿಸಿ ರಾಮಚಂದ್ರ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದು ಸ್ವಾಗತಾರ್ಹ ಎಂದು ಹೇಳಲು ಬಯಸುತ್ತೇನೆ.

ಮಲ್ಲಿಕಾರ್ಜುನಪ್ಪ ಚಾಮರಾಜನಗರ ಜಿಲ್ಲೆಗೆ ಅಧ್ಯಕ್ಷರಾದಾಗಿನಿಂದ ಪಕ್ಷದ ಕುರಿತು ಜಿಲ್ಲೆಯಲ್ಲಿ ಗೊಂದಲದ ಗೂಡಾಗಿ ಮಾಡಿದ್ದಾರೆ. ಇವರು ಮಾಡುವ ಅಪಪ್ರಚಾರಗಳಿಗೆ ತನ್ನನ್ನು ಹೊಣೆ ಮಾಡಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಮುಜುಗರವಾಗಬಾರದೆಂದು ಮತ್ತು ತಮಗೆ ಹಾಗೂ ತಮ್ಮ ಮುಂದಿನ ಹೆಜ್ಜೆಗೆ ಹಿನ್ನಡೆಯಾಗಬಾರದೆಂದು ಭಾವಿಸಿ ತನ್ನನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿಯಿಂದ ಬಿಡುಗಡೆ ಮಾಡಿ ಅಲ್ಲಿಗೆ ತಮಗೆ ಬೇಕಾದವರನ್ನು ನೇಮಿಸಿ. ತಾವು ತನ್ನನ್ನು ಹಾಸನ ಜಿಲ್ಲೆಗೂ ಉಸ್ತುವಾರಿಯನ್ನಾಗಿ ಸೂಚಿಸಿರುವುದರಿಂದ ತಾನು ಹಾಸನ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆಂದು ಎಂದು ಪತ್ರದಲ್ಲಿ ವಿ. ಸೋಮಣ್ಣ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News