‘ಪಿಳಿಕುಳ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ’ಕ್ಕೆ ವಿಧಾನಸಭೆ ಅಸ್ತು

Update: 2018-02-22 16:49 GMT

ಬೆಂಗಳೂರು, ಫೆ. 22: ಪಶ್ಚಿಮ ಘಟ್ಟಗಳ ಮತ್ತು ಕರಾವಳಿಯ ಜೀವ ವೈವಿಧ್ಯತೆ, ಪರಂಪರೆ ಮತ್ತು ಸಂಸ್ಕೃತಿಯ ಸಂರಕ್ಷಣೆಗಾಗಿ ಮತು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕೆ ಉತ್ತೇಜಕ ಪರಿಸರ ಸೃಷ್ಟಿಸಲು ಹಾಗೂ ಪ್ರವಾಸೋದ್ಯಮ ಪ್ರೋತ್ಸಾಹ ಮಾಡಲು ಒಂದು ಪ್ರಾಧಿಕಾರ ಸ್ಥಾಪಿಸಲು ಅವಕಾಶ ಕಲ್ಪಿಸುವ ‘ಪಿಳಿಕುಳ ಅಭಿವೃದ್ಧಿ ಪ್ರಾಧಿಕಾರದ ವಿಧೇಯಕ-2018’ಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು.

ಗುರುವಾರ ವಿಧಾನಸಭೆಯಲ್ಲಿ ಯೋಜನೆ, ಸಾಂಖ್ಯಿಕ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಮ್ ವಿಧೇಯಕವನ್ನು ಮಂಡಿಸಿ, ಮಾನವ ಕಲ್ಯಾಣಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಜನಪ್ರಿಯಗೊಳಿಸುವುದು, ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಉತ್ತಮವಾದ ಶೈಕ್ಷಣಿಕ ಸಂಪನ್ಮೂಲ ಕೇಂದ್ರವನ್ನು ಅಭಿವೃದ್ಧಿ ಪಡಿಸುವುದು.

ಪರಿಸರದ ವೈಜ್ಞಾನಿಕ ಮನೋಭಾವದ ಅರಿವು-ಅಭಿವೃದ್ಧಿ ಮತ್ತು ಜನಸಾಮಾನ್ಯರಲ್ಲಿ ಯೋಚನೆ ಮಾಡುವುದನ್ನು ಉತ್ತೇಜಿಸುವುದು. ಜೀವ ವೈವಿಧ್ಯತೆಯ ಸಂರಕ್ಷಣೆ, ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಸೌಲಭ್ಯ ಕಲ್ಪಿಸುವುದು, ಪಶ್ಚಿಮ ಘಟ್ಟ ಮತ್ತು ಕರಾವಳಿಯ ಸಂಸ್ಕೃತಿ ಮತ್ತು ಪರಂಪರೆಯ ರಕ್ಷಿಸುವುದು, ಪರಿಸರ ಪ್ರವಾಸೋದ್ಯಮ ಉತ್ತೇಜನ, ಮಕ್ಕಳು ಮತ್ತು ಯುವಕರಲ್ಲಿ ಸೃಜನಾತ್ಮಕ ಪ್ರತಿಭೆಯನ್ನು ಗುರುತಿಸುವುದು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ಸೃಜನಾತ್ಮಕ ಸ್ಫೂರ್ತಿ ತುಂಬುವುದು, ಖಗೋಳ ಶಾಸ್ತ್ರ ಆಧಾರಿತ ಶಿಕ್ಷಣ ಮತ್ತು ಬಾಹ್ಯಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಂಬಂಧಿತ ವಿಭಾಗಗಳಲ್ಲಿ ಆಸಕ್ತಿ ಹುಟ್ಟಿಸುವುದು, ಪ್ರವಾಸೋದ್ಯಮದ ಮೂಲಕ ವಿಜ್ಞಾನ ಮತ್ತು ವಿಜ್ಞಾನದ ಮೂಲಕ ಪ್ರವಾಸೋದ್ಯಮದ ವಿಷಯದ ಮೂಲಕ ಪಿಳಿಕುಳದ ವಿವಿಧ ಅಂಶಗಳನ್ನು ಅನ್ವೇಷಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಣೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1996ರಲ್ಲಿ ಪಿಳಿಕುಳದಲ್ಲಿ ನಿಸರ್ಗಧಾಮ ಸ್ಥಾಪಿಸಿದ್ದು, ಸುಮಾರು 356 ಎಕರೆ ಪ್ರದೇಶದಷ್ಟು ವಿಸ್ತೀರ್ಣವಿದೆ. 200 ಕೋಟಿ ರೂ.ಗಳಷ್ಟು ಅನುದಾನ ನೀಡಲಾಗಿದ್ದು, ವಾರ್ಷಿಕ ಆರು ಲಕ್ಷ ಮಂದಿ ಪ್ರವಾಸಿಗರು ವೀಕ್ಷಿಸುತ್ತಿದ್ದಾರೆ. ರಾಜ್ಯ ಸರಕಾರ ಈಗಾಗಲೇ 40 ಕೋಟಿ ರೂ.ವೆಚ್ಚದಲಿ ಆಧುನಿಕ ತಾರಾಲಯ ಲೋಕಾರ್ಪಣೆಗೆ ಸಿದ್ದವಾಗಿದೆ. ವಾರ್ಷಿಕ 6 ಕೋಟಿ ರೂ.ವೆಚ್ಚವಾಗುತ್ತಿದ್ದು, ಪ್ರವಾಸಿಗರಿಂದಲೇ 3.42 ಕೋಟಿ ರೂ.ಶುಲ್ಕ ವಸೂಲಾಗುತ್ತಿದೆ.

ಪಿಳಿಕುಳ ನಿಸರ್ಗಧಾಮಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶ ಮತ್ತು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪಿಳಿಕುಳ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ತರಲಾಗಿದೆ ಎಂದು ಅವರು ತಿಳಿಸಿದರು. ಆ ಬಳಿಕ ಸ್ಪೀಕರ್ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಶಿವಶಂಕರ ರೆಡ್ಡಿ ವಿಧೇಯಕವನ್ನು ಮತಕ್ಕೆ ಹಾಕಿ, ವಿಧೇಯಕಕ್ಕೆ ಸರ್ವಾನುಮತದ ಅಂಗೀಕಾರ ದೊರಕಿಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News