ರಾಜಕೀಯ ಪಕ್ಷಗಳಿಗೆ ಸರಕಾರದ ರಿಯಾಯಿತಿ ಸ್ಥಗಿತಕ್ಕೆ ಮನವಿ

Update: 2018-02-22 17:12 GMT

ಹೊಸದಿಲ್ಲಿ, ಫೆ.22: ಮಾಹಿತಿ ಆಯೋಗ 2013ರಲ್ಲಿ ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿರುವ ಆರು ರಾಜಕೀಯ ಪಕ್ಷಗಳು, ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಸೇರಬೇಕೆಂದ ಷರತ್ತನ್ನು ಉಲ್ಲಂಘಿಸಿರುವ ಕಾರಣ ಈ ಪಕ್ಷಗಳು ಪರೋಕ್ಷವಾಗಿ ಸರಕಾರದ ಆರ್ಥಿಕ ನೆರವು ಪಡೆಯುವ ಸೌಲಭ್ಯವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಬೇಕು. ಮತ್ತು ಈ ಬಗ್ಗೆ ಮಾಹಿತಿ ಆಯೋಗ ಸಲಹೆಯನ್ನು ಆಹ್ವಾನಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ.

ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಎನ್‌ಸಿಪಿ, ಸಿಪಿಐ ಮತ್ತು ಸಿಪಿಎಂ ಪಕ್ಷಗಳು ತೆರಿಗೆ ರಿಯಾಯಿತಿ , ಪಕ್ಷದ ಕಚೇರಿಯ ಬಾಡಿಗೆಯಲ್ಲಿ ರಿಯಾಯಿತಿ ಸೇರಿದಂತೆ ಸರಕಾರದ ಪರೋಕ್ಷ ಆರ್ಥಿಕ ನೆರವು ಪಡೆಯುತ್ತಿರುವ ಕಾರಣ ಈ ಪಕ್ಷಗಳು ಸಾರ್ವಜನಿಕ ಪ್ರಾಧಿಕಾರಗಳಾಗಿವೆ ಎಂದು ಮಾಹಿತಿ ಆಯೋಗದ ಪೂರ್ಣಸದಸ್ಯರ ಪೀಠವು 2013ರಲ್ಲಿ ಘೋಷಿಸಿತ್ತು. ಅಲ್ಲದೆ ಈ ಪಕ್ಷಗಳು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಸೇರಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿತ್ತು.

ಆದರೆ ಸರಕಾರದ ಪರೋಕ್ಷ ಆರ್ಥಿಕ ನೆರವು ಪಡೆಯುವುದನ್ನು ಮುಂದುವರಿಸಿರುವ ಈ ಪಕ್ಷಗಳು, ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಸೇರಬೇಕು ಎಂಬ ಷರತ್ತನ್ನು ಉಲ್ಲಂಘಿಸಿವೆ ಎಂದು ದೂರುದಾರರಲ್ಲಿ ಒಬ್ಬರಾದ ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷ್ ಅಗರ್‌ವಾಲ್ ಎಂಬವರು ಮುಖ್ಯ ಮಾಹಿತಿ ಆಯುಕ್ತ ಆರ್.ಕೆ.ಮಾಥುರ್ ಅವರ ಗಮನಕ್ಕೆ ತಂದಿದ್ದರು.

   ಕಾನೂನು ರೂಪಿಸುವ ರಾಜಕೀಯ ಪಕ್ಷಗಳೇ ತಾವು ರೂಪಿಸಿರುವ ಸ್ವಾಯತ್ತ ಸಂಸ್ಥೆಯ ಸೂಚನೆಯನ್ನು ಪಾಲಿಸದಿರುವುದು ವಿಷಾದನೀಯವಾಗಿದೆ ಎಂದು ತಿಳಿಸಿದ್ದ ಅರ್ಜಿದಾರರು, ಆದೇಶ ಪಾಲನೆಗೆ ನಿರ್ದಿಷ್ಟ ದಿನವೊಂದನ್ನು ನಿಗದಿಗೊಳಿಸುವಂತೆಯೂ ಕೋರಿದ್ದರು. ರಾಜಕೀಯ ಪಕ್ಷಗಳು ಮಾಹಿತಿ ಆಯೋಗದ ಸೂಚನೆಯನ್ನು ಪಾಲಿಸದಿರುವ ಬಗ್ಗೆ ಹಲವಾರು ಅರ್ಜಿಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. ಈ ಅರ್ಜಿಗಳ ವಿಚಾರಣೆಗೆ ಆಯೋಗ ಸಮಿತಿಯೊಂದನ್ನು ರಚಿಸಿದೆ. ಆದರೆ 2016ರ ಡಿಸೆಂಬರ್ ಬಳಿಕ ಈ ಸಮಿತಿ ಸಭೆ ನಡೆಸಿಲ್ಲ. ಫೆ.20ಕ್ಕೆ ನಿಗದಿಯಾಗಿದ್ದ ವಿಚಾರಣೆಯನ್ನು ಯಾವುದೇ ಕಾರಣ ನೀಡದೆ ಮುಂದೂಡಲಾಗಿದೆ ಎಂದು ಅಗರ್‌ವಾಲ್ ಅರ್ಜಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News