ಬಿಜೆಪಿಗೆ ಮತ ನೀಡದವರು ಕಸಾಯಿಗಳು, ಅಕ್ರಮ ಮದ್ಯಮಾರಾಟಗಾರರು ಎಂದ ಗುಜರಾತ್ ಸಚಿವ!

Update: 2018-02-23 09:09 GMT

ಅಹ್ಮದಾಬಾದ್, ಫೆ.23: ಕಸಾಯಿಗಳು ಮತ್ತು ಅಕ್ರಮ ಮದ್ಯ ಮಾರಾಟಗಾರರು ಹಾಗೂ ತ್ರಿವಳಿ ತಲಾಖ್ ಮಸೂದೆಯ ವಿರೋಧಿಗಳು ಬಿಜೆಪಿಗೆ ಮತ ನೀಡದೇ ಇರುವುದರಿಂದ ಪಕ್ಷ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೇವಲ 99 ಸ್ಥಾನಗಳಲ್ಲಿ ಗೆಲ್ಲುವಂತಾಯಿತು ಎಂದು ಗುಜರಾತ್ ಗೃಹ ಸಹಾಯಕ ಸಚಿವ ಪ್ರದೀಪ್ ಸಿಂಗ್ ಜಡೇಜಾ ಹೇಳಿದ್ದಾರೆ.

"ನಮಗೆ ಯಾರು ಮತ ನೀಡಿಲ್ಲ ಎಂದು ನಿಮಗೆ ಹೇಳುತ್ತೇನೆ. ಕಠಿಣ ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದ ನಮ್ಮ ಮೇಲೆ ಸಿಟ್ಟುಗೊಂಡಿರುವ ಆ ಕಸಾಯಿಗಳು ಹಾಗೂ ಕಠಿಣ  ಮದ್ಯ ನಿಷೇಧ ಕಾನೂನು ಜಾರಿಗೊಳಿಸಿದ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶಗೊಂಡಿರುವ ಅಕ್ರಮ ಮದ್ಯ ಮಾರಾಟಗಾರರು'' ಎಂದು  ರಾಜ್ಯಪಾಲ ಒ.ಪಿ. ಕೊಹ್ಲಿ ಅವರ ಭಾಷಣಕ್ಕೆ ವಂದನಾ ನಿರ್ಣಯದ ಸಂದರ್ಭ ವಿಧಾನಸಭೆಯಲ್ಲಿ ಮಾತನಾಡುತ್ತಾ ಸಚಿವರು ಮೇಲಿನಂತೆ ಹೇಳಿದರು.

"ಶಾಲೆಗಳ ಶುಲ್ಕದ ಮೇಲೆಯೂ ನಾವು ಮಿತಿ ಹೇರಿದ್ದರಿಂದ ಹಲವು ಶಾಲಾ ಮಾಲಕರು ಅಸಂತುಷ್ಟರಾಗಿದ್ದರು. ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್ ಪದ್ಧತಿಯಿಂದ ರಕ್ಷಣೆ ನೀಡುವ ಮಸೂದೆ ಮಂಡಿಸಿದ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಸಿಟ್ಟುಗೊಂಡಿರುವವರೂ ನಮಗೆ ಮತ ನೀಡಿಲ್ಲ. ಆದರೆ ಅವರ ಬಗ್ಗೆ ನಮಗೆ ಚಿಂತೆಯಿಲ್ಲ'' ಎಂದು ಜಡೇಜಾ ಹೇಳಿದರು.

ಬಿಜೆಪಿ ಗ್ರಾಮೀಣ ಜನರ, ಉದ್ಯೋಗ ಪಡೆದ ಯುವಕರ ಹಾಗೂ ಸರಕಾರದ ನೀತಿಗಳಿಂದ ಪ್ರಯೋಜನ ಪಡೆದ ಮಹಿಳೆಯರ ಮತಗಳ ಸಹಾಯದಿಂದ ಅಧಿಕಾರಕ್ಕೆ ಬಂದಿದೆ ಎಂದು ಅವರು  ಹೇಳಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ದಾಳಿಯಲ್ಲಿ "ಈ ಹಿಂದೆ ದೇವಸ್ಥಾನಗಳಿಗೆ ಭೇಟಿ ನೀಡದೇ ಇದ್ದ ಉನ್ನತ ಕಾಂಗ್ರೆಸ್ ನಾಯಕರೊಬ್ಬರು ಹಲವಾರು ದೇವಳಗಳಿಗೆ ಈ ಬಾರಿ ಚುನಾವಣೆಗೆ ಮುಂಚಿತವಾಗಿ ಭೇಟಿ ನೀಡಿದರೂ ಅವರ ಪಕ್ಷಕ್ಕೆ ಗುಜರಾತ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಸಾಧ್ಯವಾಗಲಿಲ್ಲ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News