ಲೋಕಪಾಲರ ನೇಮಕ ಪ್ರಕ್ರಿಯೆಯ ಮಾಹಿತಿ ನೀಡಿ : ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2018-02-23 16:22 GMT

ಹೊಸದಿಲ್ಲಿ, ಫೆ.23: ಲೋಕಪಾಲರ ನೇಮಕ ಪ್ರಕ್ರಿಯೆಯ ಅಂಗವಾಗಿ ಮಾರ್ಚ್ 1ರಂದು ಆಯ್ಕೆ ಸಮಿತಿಯ ಸಭೆ ನಡೆಯಲಿದೆ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

 ಲೋಕಪಾಲರ ನೇಮಕದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರಕಾರೇತರ ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ , ಈಗಾಗಲೇ ಐದು ವರ್ಷದಷ್ಟು ವಿಳಂಬವಾಗಿದ್ದು, ಲೋಕಪಾಲರ ನೇಮಕಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು. ಲೋಕಪಾಲರ ನೇಮಕ ಪ್ರಕ್ರಿಯೆ ಜಾರಿಯಲ್ಲಿದ್ದು ಮಾರ್ಚ್ 1ರಂದು ಪ್ರಧಾನಿ, ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡಿರುವ ಆಯ್ಕೆ ಸಮಿತಿ ಸಭೆ ಸೇರಲಿದೆ ಎಂದು ಕೇಂದ್ರ ಸರಕಾರ ತಿಳಿಸಿತು. ಲೋಕಸಭೆಯ ಸ್ಪೀಕರ್ ಹಾಗೂ ಖ್ಯಾತ ವಕೀಲರು ಸಮಿತಿಯಲ್ಲಿರುವ ಇನ್ನಿಬ್ಬರು ಸದಸ್ಯರಾಗಿದ್ದಾರೆ.

  ಅಣ್ಣಾ ಹಝಾರೆ ನೇತೃತ್ವದಲ್ಲಿ ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಮಣಿದು ಕೇಂದ್ರ ಸರಕಾರ ಲೋಕಪಾಲರನ್ನು ನೇಮಕಗೊಳಿಸಲು ಒಪ್ಪಿದ್ದು, ಈ ಕುರಿತ ಮಸೂದೆ 2013ರಲ್ಲಿ ಸಂಸತ್ತಿನಲ್ಲಿ ಅನುಮೋದನೆಗೊಂಡಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ನಿಯಮದ ಪ್ರಕಾರ ವಿರೋಧ ಪಕ್ಷದ ಅರ್ಹತೆಗೆ ಅಗತ್ಯವಿರುವ ಸ್ಥಾನವನ್ನು ಗಳಿಸಲು ಕಾಂಗ್ರೆಸ್ ವಿಫಲವಾಗಿತ್ತು. ಆದ್ದರಿಂದ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಖಾಲಿಯಿದೆ. ಲೋಕಪಾಲರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕರೂ ಓರ್ವ ಸದಸ್ಯರಾಗಬೇಕಿರುವ ಕಾರಣ, ಲೋಕಪಾಲರನ್ನು ನೇಮಿಸಲು ಅಡ್ಡಿಯಾಗಿದೆ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.

ಇದಕ್ಕೆ ತೀವ್ರ ಆಕ್ಷೇಪ ಸೂಚಿಸಿದ್ದ ಸುಪ್ರೀಂಕೋರ್ಟ್, ವಿಪಕ್ಷ ನಾಯಕರಿಲ್ಲದೆಯೂ ಲೋಕಪಾಲರನ್ನು ನೇಮಿಸಲು ಅಡ್ಡಿಯಿಲ್ಲ. ಸುಮ್ಮನೆ ನೆಪ ಹುಡುಕಬೇಡಿ, ವಿಳಂಬ ಮಾಡದೆ ಲೋಕಪಾಲರನ್ನು ನೇಮಿಸಿ ಎಂದು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿತ್ತು. ಇದರಿಂದ ಅತೀ ದೊಡ್ಡ ವಿರೋಧ ಪಕ್ಷವಾದ ಕಾಂಗ್ರೆಸ್‌ನ ಸಲಹೆ ಪಡೆಯದೆ ಲೋಕಪಾಲರನ್ನು ನೇಮಿಸಲು ಸರಕಾರಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿತ್ತು.

 ಸರಕಾರದ ವಿಳಂಬ ಧೋರಣೆಯ ಕುರಿತು ಸುಪ್ರೀಂಕೋರ್ಟ್ ಹಲವು ಬಾರಿ ಟೀಕಿಸಿದ ಬಳಿಕ ಲೋಕಸಭೆಯಲ್ಲಿ ಅತೀ ದೊಡ್ಡ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಸಮಿತಿಯಲ್ಲಿ ಸೇರಿಸಿಕೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News