ಹನೂರು: ಸೋಮ್ಮಣ್ಣರವರ ನೇತೃತ್ವದಲ್ಲಿ ಮುನ್ನಡೆದರೆ ಮಾತ್ರ ಗೆಲ್ಲಲು ಸಾದ್ಯ; ಡಾ.ದತ್ತೇಶ್‍ಕುಮಾರ್

Update: 2018-02-23 17:11 GMT

ಹನೂರು,ಫೆ.23: ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸೋಮ್ಮಣ್ಣರವರ ನೇತ್ರತ್ವದಲ್ಲಿ ಮುನ್ನಡೆದರೆ ಮಾತ್ರ ಈ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಹ ಕಾಂಗ್ರೇಸ್‍ನ ಭದ್ರಕೋಟೆಯನ್ನು ಬೇಧಿಸಿ, ಬಿಜೆಪಿ ಪಕ್ಷದ ಶಾಸಕರು ಗೆಲ್ಲಲು ಸಾದ್ಯ. ಆದ್ದರಿಂದ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿ ಮತ್ತು ಹನೂರು ಕ್ಷೇತ್ರದಿಂದ ಅವರನ್ನು ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಬಿಜೆಪಿ ರಾಷ್ಟ್ರೀಯ ನಾಯಕರುಗಳಿಗೆ ಮತ್ತು ರಾಜ್ಯಾದ್ಯಕ್ಷರಾದ ಯಡಿಯೂರಪ್ಪನವರಿಗೆ ಬಿಜೆಪಿ ಮುಖಂಡ ಡಾ.ದತ್ತೇಶ್‍ಕುಮಾರ್ ಮನವಿ ಮಾಡಿದರು.

ಹನೂರು ಪಟ್ಟಣದ ಲೋಕೂಪಯೋಗಿ ವಸತಿ ಗೃಹದಲ್ಲಿ  ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವವನ್ನು ಬೆಂಬಲಿಸಿ ಸೋಮಣ್ಣನವರ ನಾಯಕತ್ವದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ಮುಖಂಡರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 1200 ಮತಗಳಿಸಿದ್ದ ಬಿಜೆಪಿ ಈ ಭಾರಿ ನಡೆದ ಜಿ.ಪಂ, ತಾ.ಪಂಗಳಲ್ಲಿ ಸುಮಾರು 56900 ಮತಗಳನ್ನು ಪಡೆಯಲು ಸಾಧ್ಯವಾಯಿತು ಎಂದರು.

ಹನೂರು ವಿಧಾನ ಸಭಾ ಕ್ಷೇತ್ರದ 14 ಗ್ರಾಪಂ ಪಂಚಾಯತ್ ಗಳ ಒಟ್ಟು 623 ಸದಸ್ಯರಲ್ಲಿ 250 ಸದಸ್ಯರು ಬಿಜೆಪಿ ಬೆಂಬಲಿತ ಸದಸ್ಯರಾಗಿ ಆಯ್ಕೆಯಾದರು. ಹಾಗೆಯೇ 24 ತಾಲೂಕು ಪಂಚಾಯತ್ ನಲ್ಲಿ 9 ತಾಪಂ ಪಂಚಾಯತ್ ಗಳನ್ನು ಮತ್ತು 7 ಜಿಲ್ಲೆ ಪಂಚಾಯತ್ ನಲ್ಲಿ 3 ಜಿಲ್ಲೆ ಪಂಚಾಯತನ್ನು ವಿ .ಸೋಮ್ಮಣ್ಣರವರ ನೇತೃತ್ವದಲ್ಲಿ ವಶ ಪಡಿಸಕೂಳ್ಳಲು ಯಶಸ್ವಿಯಾದೆವು. ಆದ್ದರಿಂದ ಅಭಿವೃದ್ದಿಯ ಚಿಂತನೆ ಮತ್ತು ಸಂಘಟನೆಯ ಶಕ್ತಿ ಅವರಲ್ಲಿ ಇರುವುದರಿಂದ ಆರ್ಥಿಕವಾಗಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವ ಜಿಲ್ಲೆಗೆ ಉಸ್ತುವಾರಿಯಾಗಿ ಅವರೇ ಮುಂದುವರೆಯಲಿ ಮತ್ತು ಹನೂರು ಕ್ಷೇತ್ರದಿಂದ ಸ್ಪರ್ಧೆ ಮಾಡಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ತಿಳಿಸಿದರು.

ಅಭಿವೃದ್ದಿ ಕಾರ್ಯಗಳಿಗೆ ಒತ್ತು: ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ  ವಿ ಸೋಮ್ಮಣ್ಣರವರು ವಸತಿ ಸಚಿವರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾಗಿದ್ದಾಗ ಜಿಲ್ಲೆಯ ಕೇಂದ್ರವಾದ ಚಾಮರಾಜನಗರಕೆದ ನಗರಾಭಿವೃದ್ದಿಗೆ ಸುಮಾರು 10 ಕೋಟಿ ಅನುದಾನವನ್ನು ನೀಡಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆಯಡಿಲ್ಲಿ ಮನೆಗಳನ್ನು ನಿರ್ಮಾಣ ಮಾಡಲು 14ಸಾವಿರ ಮತ್ತು ಚಾಮರಾಜನಗರಕ್ಕೆ 12 ಸಾವಿರ ಹಕ್ಕು ಪತ್ರ ವಿತರಣೆಮಾಡಿದ್ದಾರೆ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ಇಂಜಿನೀಯರಿಂಗ್ ಕಾಲೇಜು, ಬಹುಗ್ರಾಮ ಕುಡಿಯುವ ನೀರು ಯೋಜನೆ ಮಹದೇಶ್ವರ ಅಭಿವೃದ್ದಿ ಪ್ರಾದಿಕಾರ ರಚನೆ ಮತ್ತು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗಲೇ ಹನೂರು ತಾಲೂಕು ಘೋಷಣೆಯಾಗಿತ್ತು. ತಾಲೂಕು ಆಗಲು ಕಾರಣವೇ ವಿ. ಸೋಮ್ಮಣ್ಣನವರು ಮತ್ತು ಜಿಲ್ಲೆಯಲ್ಲಿ ಇನ್ನಿತರರ ಅಭಿವೃದ್ದಿಗಳಿಗೆ ಹೆಚ್ಚು ಒತ್ತು ಕೊಟ್ಟು ಜಿಲ್ಲೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಇಡೀ ಜಿಲ್ಲೆಯ ಅಭಿವೃದ್ದಿಯ ದೃಷ್ಟಿಯಿಂದ ಜಿಲ್ಲೆಗೆ ವಿ .ಸೋಮ್ಮಣ್ಣರವರು ಉಸ್ತುವಾರಿಯಾಗಿ ಬರಬೇಕು ಎಂದು ತಿಳಿಸಿದರು.

ಸ್ವಾತಂತ್ರ್ಯ ಬಂದಾಗಿನಿಂದ ದಿವಂಗತ ರಾಜೂಗೌಡರು ಹಾಗೂ ಹೆಚ್.ನಾಗಪ್ಪನವರ ಅವರ ಅವಧಿಯಲ್ಲಿ ಅಭಿವೃದ್ದಿ ಹೊಂದಿದ್ದು ಬಿಟ್ಟರೆ ಅನಂತರ ಕಳೆದ 10 ವರ್ಷಗಳಿಂದ ಯಾವುದೇ ಅಭಿವೃದ್ದಿ ಹೊಂದಿಲ್ಲ. ಆದ್ದರಿಂದ ನಮ್ಮ ಕ್ಷೇತ್ರ ಅಭಿವೃದ್ದಿ ಕಾಣಬೇಕು. ಇಡೀ ಕರ್ನಾಟಕದ ಅಭಿವೃದ್ದಿ ಭೂಪಟದಲ್ಲಿ ನಮ್ಮ ಹನೂರು ಕ್ಷೇತ್ರ ಮುಂಚೂಣಿಗೆ ಬರಬೇಕು. ನಮ್ಮ ಯುವಕರ ಮುಂದಿನ ಭವಿಷ್ಯದ ದೃಷ್ಟಿಯಿಂದ ಮತ್ತು ನಮ್ಮ ಕ್ಷೇತ್ರದ ಎಲ್ಲಾ ಕನಸುಗಳು ಈಡೇರಲು ವಿ ಸೋಮ್ಮಣ್ಣರವರು ಹನೂರು ಕ್ಷೇತ್ರದಿಂದ ಸ್ಪರ್ದಿಸಿದರೆ ಮಾತ್ರ ಸಾದ್ಯ. ಇವರ ಸ್ಪರ್ಧೆ ಖಂಡಿತ ಯಾರ ಸ್ವಾರ್ಥಕ್ಕೂ ಸಹ ಅಲ್ಲ ಎಂದು ಹೇಳಿದರು. 

ಪ್ರೋ ಮಲ್ಲಿಕಾರ್ಜುನಪ್ಪನವರು ಉಪನ್ಯಾಸಕ ವೃತ್ತಿಯಲ್ಲಿ ಹಿರಿಯರು ರಾಜಕೀಯ ಅನುಭವದಲ್ಲಿ ಸೋಮ್ಮಣ್ಣರವರಿಗಿಂತ ಕಿರಿಯರು. ತಮ್ಮದೇ ಆದ  ಅನುಭವದ ದಾಟಿಯಲ್ಲಿ ಮಾತನಾಡಿದರೆ ಸಂಘಟನೆಯ ದೃಷ್ಟಿಯಿಂದ ಪಕ್ಷಕ್ಕೆ ಒಳಿತಾಗುವುದು ಎಂದರು. 

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಜಯಂತಿ, ಮಂಜುಳಾ, ಮಾಜಿ ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ನಟರಾಜೇಗೌಡ , ತಾಪಂ ಸದಸ್ಯರಾದ ಲೊಕೇಶ್, ಧನಗೇರೆ ಸುರೇಶ್, ಶಂಕರ್‍ಶೆಟ್ಟಿ, ಮಾರ್ಟಳ್ಳಿ ಮಣಿನಾಯಕ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಣಿಗಾರ್ ನಾಗೇಂದ್ರಬಾಬು, ಮೂರ್ತಿ(ಲೋಕ್ಕನಹಳ್ಳಿ) ಪಟ್ಟಣ ಪಂಚಾಯತ್ ಸದಸ್ಯರಾದ ಬಸವರಾಜು, ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ಲಿಂಗೇಗೌಡ ಮುಖಂಡರಾದ ಜಯಸುಂದರ್, ವೆಂಕಟೇಗೌಡ, ನಾಗರಾಜು, ಮಹದೇವು, ಬಸವರಾಜು, ರಾಜಣ್ಣ,  ಸತೀಶ್ , ಅನಿಲ್‍ಮಣಿಗಾರ್ ಇನ್ನಿತರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News