ದಾವಣಗೆರೆ: ಬಿಜೆಪಿ ರೈತ ಮೋರ್ಚಾದಿಂದ ಜನಜಾಗೃತಿ ಬೈಕ್ ಜಾಥ

Update: 2018-02-24 12:00 GMT

ದಾವಣಗೆರೆ,ಫೆ.24: ಇದೇ ತಿಂಗಳ 27 ರಂದು ನಗರದಲ್ಲಿ ರಾಜ್ಯಮಟ್ಟದ ರೈತ ಸಮಾವೇಶ ಆಯೋಜಿಸಲಾಗಿರುವ ಹಿನ್ನಲೆಯಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಏರ್ಪಡಿಸಿದ್ದ ಜನಜಾಗೃತಿ ಬೈಕ್ ಜಾಥಕ್ಕೆ ಶನಿವಾರ ಸಂಸದ ಸಿದ್ದೇಶ್ವರ ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ಬೈಕ್ ಚಲಾಯಿಸುವ ಮೂಲಕ ಚಾಲನೆ ನೀಡಿದರು.  

ಈ ವೇಳೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಹಿನ್ನಲೆಯಲ್ಲಿ ಇದೇ 27 ರಂದು ನಗರದ ಹೈಸ್ಕೂಲ್ ಮೈದಾನದಲ್ಲಿ ರಾಜ್ಯಮಟ್ಟದ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಹಾವೇರಿ, ಚಿತ್ರದುರ್ಗ ಮತ್ತು ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ 2 ಲಕ್ಷಕ್ಕೂ ಅಧಿಕ ರೈತ ಭಾಂದವರು ಭಾಗವಹಿಸಲಿದ್ದಾರೆ ಎಂದರು. 

27 ರಂದು ಮಧ್ಯಾಹ್ನ 3 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ ಇಲ್ಲಿಂದಲೇ  ಚುನಾವಣೆ ಪ್ರಚಾರ ಆರಂಭಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ನೇಗಿಲನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಮಾಹಿತಿ ನೀಡಿದರು. 

ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ನಂತರ ಎರಡನೇ ಬಾರಿಗೆ ದಾವಣಗೆರೆಗೆ ಆಗಮಿಸುತ್ತಿದ್ದಾರೆ. ರಾಷ್ಟ್ರ ನಾಯಕರ ಮಿಷನ್ 150 ಗುರಿಗೆ ಇದೇ ವೇಳೆ ಪ್ರಧಾನ ಮಂತ್ರಿಗಳು ಚಾಲನೆ ನೀಡಲಿದ್ದಾರೆ. ಯಡಿಯೂರಪ್ಪ ಅವರ ಜನ್ಮ ದಿನದಂದು ಕರ್ನಾಟಕದಲ್ಲಿ ಪ್ರಧಾನಿ ಹೊಸ ಅಲೆಯನ್ನು ಸೃಷ್ಠಿಸಲಿದ್ದಾರೆ. ಅಂದು ನರೇಂದ್ರ ಮೋದಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲು ಜಿಲ್ಲಾ ಬಿಜೆಪಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು. 

ನಗರದ ರಾಮ್ ಅಂಡ್ ಕೋ ವೃತ್ತದಿಂದ ಪ್ರಾರಂಭಗೊಂಡ ಬೈಕ್ ರ್ಯಾಲಿಯು ಪಿಬಿ ರಸ್ತೆ, ವಿನೋಬನಗರ, ಮೋದಿ ವೃತ್ತ, ಬಿಐಇಟಿ ರಸ್ತೆ, ವಿದ್ಯಾನಗರದ ವೃತ್ತದಿಂದ ನಿಟುವಳ್ಳಿ ಮುಖ್ಯರಸ್ತೆ, ಡಾಂಗೆ ಪಾರ್ಕ್ ವೃತ್ತ, ಶಿವಪ್ಪಯ್ಯ ವೃತ್ತ, ತ್ರಿಶೂಲ್ ಚಿತ್ರಮಂದಿರ, ಪಿಬಿ ರಸ್ತೆ ಮೂಲಕ ಮಂಡಿಪೇಟೆ ಮಾರ್ಗವಾಗಿ ಹೈಸ್ಕೂಲ್ ಮೈದಾನ ತಲುಪಿತು. ಸುಮಾರು 2 ಸಾವಿರಕ್ಕೂ ಅಧಿಕ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು. 

ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾದವ್, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್,ಎಂ.ಪಿ.ರೇಣುಕಾಚಾರ್ಯ, ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿ ಸ್ವಾಮಿ, ರಾಜನಹಳ್ಳಿ ಶಿವಕುಮಾರ್, ಕುಣಿಬೆಳಕೆರೆ ದೇವೆಂದ್ರಪ್ಪ, ಕೊಂಡಜ್ಜಿ ಜಯಪ್ರಕಾಶ್ ಪಿ.ಸಿ.ಶ್ರೀನಿವಾಸ್, ಲೋಕಿಕೆರೆ ನಾಗರಾಜ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್, ಪಾಲಿಕೆ ಸದಸ್ಯ ಡಿ.ಕುಮಾರ್  ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News