ನೌಕಾನೆಲೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ : ಕ್ಷಮೆಯಾಚಿಸಿದ ರಕ್ಷಣಾ ಸಚಿವೆ

Update: 2018-02-25 05:59 GMT

ಕಾರವಾರ, ಫೆ.24: ದೇಶಕ್ಕಾಗಿ ಬೃಹತ್ ನೌಕಾನೆಲೆ ಸ್ಥಾಪಿಸಲು 30 ವರ್ಷಗಳ ಹಿಂದೆ ತಮ್ಮ ಜಮೀನು ತ್ಯಾಗ ಮಾಡಿದ್ದ 96 ಜನರಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸಾಂಕೇತಿಕವಾಗಿ 4.52 ಕೋಟಿ ರೂ. ಪರಿಹಾರದ ಚೆಕ್‌ಗಳನ್ನು ವಿತರಿಸಿದರು.

ಇಲ್ಲಿಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾರಂಭದಲ್ಲಿ ಪರಿಹಾರದ ಚೆಕ್ ವಿತರಣೆಗೆ ವಿಳಂಬವಾಗಿದ್ದಕ್ಕೆ ಕ್ಷಮಾಯಾಚನೆ ಮಾಡಿದರು. ದೇಶಕ್ಕಾಗಿ ತಮ್ಮ ಜಮೀನು ನೀಡಿದ್ದಕ್ಕೆ ಸಂತ್ರಸ್ತರಿಗೆ ಧನ್ಯವಾದ ಸಲ್ಲಿಸಿದರು.

ಜಮೀನು ನೀಡಿದವರಿಗೆ ಕೇಂದ್ರ ಸರಕಾರದಿಂದ ಒಟ್ಟು 587 ಕೋಟಿ ರೂ. ನೀಡಬೇಕಾಗಿತ್ತು. ಆದರೆ 2014ರ ಪೂರ್ವದಲ್ಲಿ ಇದ್ದ ಸರಕಾರ ಈ ಬಗ್ಗೆ ಸೂಕ್ತ ರೀತಿಯಲ್ಲಿ ಪರಿಹಾರ ಕೈಗೊಂಡಿಲ್ಲ. ಪರಿಹಾರ ರೂಪವಾಗಿ ಹಿಂದಿನ ಸರಕಾರ ಕೇವಲ 75 ಕೋಟಿ ರೂ. ನೀಡಿತ್ತು. ಆದರೆ ಆ ಹಣವೂ ಜನರ ಖಾತೆಗೆ ಸೇರಿಲ್ಲ. ಪ್ರಧಾನಿ ಮೋದಿ ಸರಕಾರ ಆಡಳಿತಕ್ಕೆ ಬಂದ ಮೂರು ವರ್ಷಗಳ ಅವಧಿಯಲ್ಲಿ ಈವರೆಗೆ 459 ಕೋಟಿ ರೂ. ಪರಿಹಾರ ನೀಡಲಾಗಿದೆ. ಬಾಕಿ ಇರುವ 53 ಕೋಟಿ ರೂ.ಗಳನ್ನು ಫೆ.27ರೊಳಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾರವಾರ ಮತ್ತು ಅಂಕೋಲಾ ತಾಲೂಕುಗಳ 13 ಗ್ರಾಮಗಳಲ್ಲಿ ಭಾರತೀಯ ರಕ್ಷಣಾ ಸಚಿವಾಲಯದಿಂದ ನೌಕಾನೆಲೆಯನ್ನು ಸ್ಥಾಪಿಸುವ ಉದ್ದೇಶದಿಂದ 2,412 ಎಕರೆ 15 ಗುಂಟೆ ಖಾಸಗಿ ಜಮೀನನ್ನು 1988ರಿಂದ 2000ರವರೆಗೆ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಮಾಜಿ ಭೂ ಮಾಲಕರು ಮತ್ತು ಅವರ ಅವಲಂಬಿತ ಕುಟುಂಬದವರಿಗೆ 126 ಕೋಟಿ ರೂ.ಗಳಲ್ಲಿ 22.55 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದರು.

ಈ ಪರಿಹಾರ ಮೊತ್ತಕ್ಕೆ ಸಂತೃಪ್ತಿ ಹೊಂದದ ಮಾಜಿ ಭೂ ಮಾಲಕರು ಕಾರವಾರ ವಿಶೇಷ ಭೂ ಸ್ವಾಧೀನ ಅಧಿಕಾರಿಗಳಲ್ಲಿ ಭೂಸ್ವಾಧೀನ ಕಾಯ್ದೆ 1894ರನ್ವಯ ಹೆಚ್ಚುವರಿ ಪರಿಹಾರ ಮೊತ್ತ ಕೋರಿ ಮೊಕದ್ದಮೆ ಹೂಡಿದ್ದರಿಂದ ಸುಪ್ರೀಂಕೋರ್ಟ್ ಪ್ರತೀ ಎಕರೆಗೆ 4.60 ಲಕ್ಷ ರೂ.ನ್ನು ನೀಡಬೇಕೆಂದು ಆದೇಶ ನೀಡಿತ್ತು ಎಂದರು. ಅರ್ಜಿಯನ್ನು ಭರ್ತಿ ಮಾಡಿದ ಮಾಜಿ ಭೂ ಮಾಲಕರಿಗೆ ಕಾಯ್ದೆಯ 28ಎ ಕಲಂನಡಿ ಸಚಿವಾಲಯದಿಂದ 858 ಪ್ರಕರಣಗಳಲ್ಲಿ 207.11 ಕೋಟಿ ರೂ. ಮೊತ್ತ ನೀಡಲಾಗಿದೆ.

ಬೆಂಗಳೂರಿನ ಡಿಇಎಂ ಕಚೇರಿಯಿಂದ 2018ರ ಫೆ.23ರಂದು 154 ಕೋಟಿ ರೂ. ಪರಿಹಾರವನ್ನು ಕಾರವಾರದ ವಿಶೇಷ ಭೂ ಸ್ವಾಧೀನ ಕಚೇರಿಗೆ ತಲುಪಿಸಲಾಗಿದ್ದು, ಉಳಿದ 53,11,58,544 ರೂ. ಫೆಬ್ರವರಿ ಅಂತ್ಯದೊಳಗೆ ನೀಡಲಾಗುವುದು ಎಂದು ತಿಳಿಸಿದರು.
ಒಟ್ಟು 587 ಕೋಟಿ ರೂ.ಯಲ್ಲಿ 18(1), ಮತ್ತು 28(ಎ) ಸೇರಿದಂತೆ ಫಲಾನುಭವಿಗಳಿಗೆ ಕೇಂದ್ರ ಸರಕಾರವು ಈಗಾಗಲೇ 534 ಕೋಟಿ ರೂ.ಯನ್ನು ವಿಶೇಷ ಭೂ ಸ್ವಾಧೀನ ಇಲಾಖೆಗೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ, ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಸೀಬರ್ಡ್ ಅಧಿಕಾರಿಗಳು ಹಾಗೂ ಇನ್ನಿತರರು ಇದ್ದರು.

ಸುಪ್ರೀಂ ಕೋರ್ಟ್ ಆದೇಶದನ್ವಯ ಭಾರತ ರಕ್ಷಣಾ ಸಚಿವಾಲಯವು 1,008 ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ ಹೆಚ್ಚುವರಿ 380.42 ಕೋಟಿ ರೂ. ಪರಿಹಾರ ಮೊತ್ತವನ್ನು ವಿಶೇಷ ಭೂಸ್ವಾಧೀನ ಅಧಿಕಾರಿಗಳು ವಿತರಿಸಿದ್ದಾರೆ. ಬಾಕಿ ಇರುವ 53 ಕೋಟಿ ರೂ.ಯನ್ನು ಫೆ.27ರೊಳಗೆ ನೀಡಲಾಗುವುದು.
ನಿರ್ಮಲಾ ಸೀತಾರಾಮನ್, ಕೇಂದ್ರ ರಕ್ಷಣಾ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News