ರೇಶನ್ ಕಾರ್ಡ್‌ಗೆ ಆಧಾರ್ ಜೋಡಣೆ: ಅಂತಿಮ ದಿನಾಂಕ ಮುಂದೂಡಲು ನಿರಾಕರಿಸಿದ ಬಾಂಬೆ ಹೈಕೋರ್ಟ್

Update: 2018-02-25 15:14 GMT

ಮುಂಬೈ, ಫೆ.25: ರೇಶನ್ ಕಾರ್ಡ್‌ಗೆ ಆಧಾರ್ ಜೋಡಣೆ ಮಾಡಲು ಕೇಂದ್ರ ಸರಕಾರ ನಿಗದಿಪಡಿಸಿರುವ ಮಾರ್ಚ್ 31ರ ಅಂತಿಮ ದಿನಾಂಕವನ್ನು ಮುಂದೂಡಲು ಬಾಂಬೆ ಉಚ್ಚ ನ್ಯಾಯಾಲಯ ನಿರಾಕರಿಸಿದೆ. ಆದರೆ, ರೇಶನ್ ಕಾರ್ಡ್‌ಗೆ ಆಧಾರ್ ಜೋಡಿಸುವ ಪ್ರಕ್ರಿಯೆಯಲ್ಲಿ ಜನರಿಗೆ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳ ದೂರುಗಳನ್ನು ಪರಿಶೀಲಿಸುವಂತೆ ನ್ಯಾಯಾಧೀಶ ಶಾಂತನು ಕೇಮ್ಕರ್ ಮತ್ತು ರಾಜೇಶ್ ಕೇತ್ಕರ್ ಅವರ ಪೀಠವು ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದೆ.

ನಾಸಿಕ್ ನಿವಾಸಿ ಅಝೀಝ್ ಪಠಾಣ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುವ ವೇಳೆ ಪೀಠವು ಈ ಸೂಚನೆಯನ್ನು ನೀಡಿದೆ. ಮಹಾರಾಷ್ಟ್ರ ಸರಕಾರವು ರೇಶನ್ ಕಾರ್ಡ್‌ಗಳ ಡಿಜಿಟೈಸೇಶನ್‌ಗಾಗಿ ಯೋಜನೆಯನ್ನು ಸೂಚಿಸಿ ಹೊರಡಿಸಿದ್ದ ಅಧಿಸೂಚನೆಯ ವಿರುದ್ಧ ಈ ಅರ್ಜಿಯನ್ನು ಹಾಕಲಾಗಿತ್ತು. ಈ ಯೋಜನೆಯನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮತ್ತು ಸಾರ್ವಜನಿಕ ಹಂಚಿಕಾ ವ್ಯವಸ್ಥೆಯಲ್ಲಿ (ಪಿಡಿಎಸ್) ಪಾರದರ್ಶಕತೆ ತರುವ ಉದ್ದೇಶದಿಂದ ಜಾರಿಗೆ ತರಲಾಗಿತ್ತು. ಈ ಯೋಜನೆಯು, ರೇಶನ್ ಕಾರ್ಡ್‌ಗಳ ಡಿಜಿಟೈಸೇಶನ್, ನ್ಯಾಯಬೆಲೆ ಅಂಗಡಿಗಳಲ್ಲಿ ವಿದ್ಯುನ್ಮಾನ ಮಾರಾಟ ಅಂಕ ಉಪಕರಣಗಳ ಅಳವಡಿಕೆ ಮತ್ತು ಬಯೋಮೆಟ್ರಿಕ್ ದೃಢೀಕರಣದ ಮೂಲಕ ಆಹಾರ ಧಾನ್ಯಗಳನ್ನು ನೀಡುವಿಕೆ ಮುಂತಾದ ಕ್ರಮಗಳನ್ನು ಒಳಗೊಂಡಿದೆ. ದೂರುದಾರರ ಪ್ರಕಾರ, ನಾಸಿಕ್‌ನಲ್ಲಿ ಅನೇಕ ಫಲಾನುಭವಿಗಳು ರೇಶನ್ ಕಾರ್ಡ್‌ನ ಡಿಜಿಟೈಸೇಶನ್ ಮತ್ತು ಬಯೋಮೆಟ್ರಿಕ್ ದೃಢೀಕರಣದಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಬಯೋಮೆಟ್ರಿಕ್ ಯಂತ್ರಗಳಲ್ಲಿ ಅಸಮಂಜಸತೆಗಳಿವೆ ಹಾಗೂ ಅನೇಕ ನವೀಕೃತ ರೇಶನ್ ಕಾರ್ಡ್‌ಗಳಲ್ಲಿ ಹೆಸರು, ವಿಳಾಸ, ಉದ್ಯೋಗ ಹಾಗೂ ಜಾತಿಯ ವಿವರಗಳನ್ನು ತಪ್ಪಾಗಿ ನಮೂದಿಸಲಾಗಿದೆ ಎಂದು ಪಠಾಣ್ ಆರೋಪಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ರೇಶನ್ ಕಾರ್ಡ್‌ಗೆ ಆಧಾರ್ ಜೋಡಿಸಲು ಸಮಸ್ಯೆಯಾಗುತ್ತಿದೆ ಮತ್ತು ಹಾಗಾಗಿ ಈ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದು ಅವರು ದೂರಿದ್ದಾರೆ. ಹಾಗಾಗಿ ಸರಕಾರವು ನಿಗದಿಪಡಿಸಿರುವ ಮಾರ್ಚ್ 31ರ ಗಡುವನ್ನು ಮುಂದೂಡಬೇಕೆಂದು ಅವರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News