ತೃಣಮೂಲ ಕಾಂಗ್ರೆಸ್‌ಗೆ ಫುಟ್ಬಾಲ್ ದಂತಕತೆ ಭುಟಿಯಾ ರಾಜೀನಾಮೆ

Update: 2018-02-26 06:00 GMT

ಕೋಲ್ಕತಾ, ಫೆ.26: ಭಾರತದ ಫುಟ್ಬಾಲ್ ತಂಡದ ದಂತಕತೆ ಬೈಚುಂಗ್ ಭುಟಿಯಾ ರಾಜಕೀಯದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದು, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದಾರೆ.

ಭಾರತದ ಲೆಜೆಂಡ್ ಸ್ಟ್ರೈಕರ್ ಭುಟಿಯಾ ಸಾಮಾಜಿಕ ಜಾಲತಾಣ ಟ್ವಿಟರ್‌ನ ಮೂಲಕ ತನ್ನ ನಿರ್ಧಾರ ಪ್ರಕಟಿಸಿದ್ದಾರೆ.

‘‘ನಾನು ಇಂದು ಅಧಿಕೃತವಾಗಿ ತೃಣಮೂಲ ಕಾಂಗ್ರೆಸ್‌ನ ಸದಸ್ಯತ್ವಕ್ಕೆ ಹಾಗೂ ಎಲ್ಲ ರಾಜಕೀಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಇನ್ನು ಮುಂದೆ ಭಾರತದ ರಾಜಕೀಯ ಪಕ್ಷದಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ’’ ಎಂದು ಹೇಳಿದ್ದಾರೆ.

 ಭಾರತದ ಮಾಜಿ ನಾಯಕ ಭುಟಿಯಾ 2013ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದರು. ಇನ್ನಷ್ಟು ಕ್ರೀಡಾಪಟುಗಳು ರಾಜಕೀಯಕ್ಕೆ ಸೇರಬೇಕೆಂಬ ಬಯಕೆ ವ್ಯಕ್ತಪಡಿಸಿದ್ದರು. ಪಕ್ಷ ಸೇರಿ ಒಂದು ವರ್ಷದ ಬಳಿಕ 2014ರಲ್ಲಿ ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭುಟಿಯಾ ಬಿಜೆಪಿಯ ಎಸ್‌ಎಸ್ ಅಹ್ಲುವಾಲಿಯಾ ವಿರುದ್ಧ 1,96,795 ಮತಗಳ ಅಂತರದಿಂದ ಸೋತಿದ್ದರು.

2008ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಭುಟಿಯಾ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿದಿದ್ದರು. ಆದರೆ, ಇತ್ತೀಚೆಗೆ ಪ್ರತ್ಯೇಕ ಗೊರ್ಖಾಲ್ಯಾಂಡ್‌ಗೆ ಬೆಂಬಲ ವ್ಯಕ್ತಪಡಿಸಿ ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರು.

ಹೊಸದಿಲ್ಲಿಯಲ್ಲಿ ಭೈಚುಂಗ್ ಭುಟಿಯಾ ಫುಟ್ಬಾಲ್ ಶಾಲೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಭುಟಿಯಾ 2016ರಲ್ಲಿ ರಾಜ್ಯ ಚುನಾವಣೆಯಲ್ಲಿ ಸಿಲಿಗುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಸಿಪಿಐ(ಎಂ) ಹಿರಿಯ ನಾಯಕ ಅಶೋಕ್ ಭಟ್ಟಾಚಾರ್ಯ ವಿರುದ್ಧ 14,072 ಮತಗಳಿಂದ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News