ಗೋವಾ:ಲೋಕಸಭಾ ಚುನಾವಣೆಯಲ್ಲಿ ಜಿಎಸ್‌ಎಂ ಜೊತೆ ಶಿವಸೇನೆ ಮೈತ್ರಿ

Update: 2018-02-26 13:15 GMT

ಪಣಜಿ,ಫೆ.26: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಪಕ್ಷವನ್ನು ಬಲಗೊಳಿಸಲು ಶಿವಸೇನೆಯು ಮುಂದಾಗಿದ್ದು, ಗೋವಾದಲ್ಲಿನ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಗೋವಾ ಸುರಕ್ಷಾ ಮಂಚ್(ಜಿಎಸ್‌ಎಮ್)ನ ಮೈತ್ರಿಯೊಂದಿಗೆ ಸ್ಪರ್ಧಿಸಲಿದೆ ಎಂದು ಪಕ್ಷದ ಹಿರಿಯ ನಾಯಕ ಹಾಗೂ ವಕ್ತಾರ ಸಂಜಯ ರಾವುತ್ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಿವಸೇನೆಯು ಕಳೆದ ವರ್ಷ ನಡೆದಿದ್ದ ಗೋವಾ ವಿಧಾನಸಭಾ ಚುನಾವಣೆಗಳಲ್ಲಿ ಮಾಜಿ ಆರೆಸ್ಸೆಸ್ ನಾಯಕ ಸುಭಾಷ ವೆಲಿಂಗಕರ್ ನೇತೃತ್ವದ ಜಿಎಸ್‌ಎಂ ಜೊತೆ ಮೈತ್ರಿ ಮಾಡಿಕೊಂಡಿತ್ತಾದರೂ ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.

ಶಿವಸೇನೆಯ ವರಿಷ್ಠ ಉದ್ಧವ್ ಠಾಕ್ರೆ ಅವರು ರಾಜ್ಯದಲ್ಲಿ ಪಕ್ಷದ ಬುನಾದಿಯನ್ನು ಬಲಗೊಳಿಸಲು ಮುಂದಿನ ತಿಂಗಳು ಗೋವಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ ರಾಜ್ಯಸಭಾ ಸದಸ್ಯರೂ ಆಗಿರುವ ರಾವುತ್, ಶಿವಸೇನೆಯು ರಾಜ್ಯದಲ್ಲಿಯ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿಗಳಲ್ಲೊಂದಾಗಿದೆ ಎಂದು ಹೇಳಿಕೊಂಡರು.

ಉತ್ತರ ಮತ್ತು ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರಗಳು ಬಿಜೆಪಿ ಕೈಯಲ್ಲಿವೆ.

ಫೆ.22ರಂದಷ್ಟೇ ಮುಂಬೈನ ಆಸ್ಪತ್ರೆಯಿಂದ ಬಿಡುಗಡೆಗೊಂಡು, ಪುನಃ ಅನಾರೋಗ್ಯ ದಿಂದಾಗಿ ಗೋವಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರ ಶೀಘ್ರ ಚೇತರಿಕೆಯನ್ನು ರಾವುತ್ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News