ಚಿಕ್ಕಮಗಳೂರು: ಪೌರ ಕಾರ್ಮಿಕರಿಗೆ ಸರಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ

Update: 2018-02-27 12:00 GMT

ಚಿಕ್ಕಮಗಳೂರು, ಫೆ.27: ಹೊರಗುತ್ತಿಗೆ ಮತ್ತು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳು ಮತ್ತು ಮ್ಯಾನ್‍ಹೋಲ್ ಸ್ಕ್ಯಾವೆಂಜರ್ಸ್‍ಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಸಫಾಯಿ ಕರ್ಮಚಾರಿ ನಿಗಮದ ವತಿಯಿಂದ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕೆಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ವಿಜಯ್ ಕುಮಾರ್ ಕರೆ ನೀಡಿದ್ದಾರೆ.

ಕರ್ನಾಟಕ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವತಿಯಿಂದ ಮಂಗಳವಾರ ನಗರದ ಪೌರಸೇವಾ ನೌಕರರ ಕಾಲನಿಯಲ್ಲಿ ಆಯೋಜಿಸಲಾಗಿದ್ದ ವಿವಿಧ ಸರಕಾರಿ ಯೋಜನೆಗಳ ಮಾಹಿತಿ ಸಭೆಯಲ್ಲಿ  ಮಾತನಾಡಿದ ಅವರು, ಸಫಾಯಿ ಕರ್ಮಚಾರಿಗಳಿಗೆ ಮತ್ತು ಮ್ಯಾನ್‍ಹೋಲ್ ಸ್ಕ್ಯಾವೆಂಜರ್ಸ್‍ಗಳಿಗೆ ಈ ಹಿಂದೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದಲೇ ಸೌಲಭ್ಯಗಳನ್ನು ನೀಡಲಾಗುತ್ತಿತ್ತು. ಸೌಲಭ್ಯಗಳು ಸೂಕ್ತ ಫಲಾನುಭವಿಗಳನ್ನು ತಲುಪುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮವನ್ನು ಸರಕಾರ ಸ್ಥಾಪಿಸಿದೆ ಎಂದರು.

ಉದ್ಯಮಶೀಲತಾ ಯೋಜನೆಯಡಿ ಒಂದರಿಂದ ಐದುಲಕ್ಷ ಘಟಕ ವೆಚ್ಚದ ಯೋಜನೆಗಳಿಗೆ ಶೇ.70ರಷ್ಟು ಸಹಾಯಧನ ಸೇರಿದಂತೆ 5ರಿಂದ 10 ಲಕ್ಷ ರೂ. ವರೆಗೂ ಘಟಕ ವೆಚ್ಚದ ಅನುದಾನಗಳನ್ನು ನಿಗಮದ ವತಿಯಿಂದ ನೀಡಲಾಗುವುದು ಎಂದು ಮಾಹಿತಿ ನೀಡಿದ ಅವರು, ಮೈಕ್ರೋ ಕ್ರೆಡಿಟ್ ಯೋಜನೆಯಡಿಯಲ್ಲಿ ಸಣ್ಣ ವ್ಯಾಪಾರ ನಡೆಸಲು 25 ಸಾವಿರ ರೂ. ನೇರ ಸಾಲ ನೀಡಲಾಗುತ್ತಿದ್ದು, ಇದರಲ್ಲಿ 10 ಸಾವಿರ ರೂ. ಸಬ್ಸಿಡಿ ನೀಡಲಾಗುವುದು. ಮಹಿಳಾ ಅಭಿವೃದ್ಧಿ ಯೋಜನೆಯಡಿ ವ್ಯಾಪಾರ ಮಾಡಲು ಇಚ್ಚಿಸುವ ಮಹಿಳೆಯರಿಗೆ 25 ಸಾವಿರ ನೇರ ಸಾಲ ನೀಡಲಾಗುತ್ತಿದೆ. ಸಫಾಯಿ ಕರ್ಮಚಾರಿಗಳಿಗೆ ವಸತಿ ಯೋಜನೆಗೆ 5.5 ಲಕ್ಷ ರೂ., ನಿವೇಶನ ರಹಿತರಿಗೆ ನಿವೇಶನ ಖರೀದಿಗೆ ಅನುದಾನ ಸೇರಿದಂತೆ ವಿವಿಧ ಕೌಶಲ್ಯ ತರಬೇತಿಗಳನ್ನೂ ನೀಡಲಾಗುತ್ತಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ವಸಂತಕುಮಾರ್, ತಾ. ಸಂಚಾಲಕ ಚಂದ್ರಪ್ಪ, ನಗರಸಭೆ ಮಾಜಿ ಸದಸ್ಯ ಗುರುಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News