ನಿಷ್ಕ್ರಿಯ ನೀತಿ ಸಲ್ಲದು,ಶಸ್ತ್ರಾಸ್ತ್ರ ಖರೀದಿ ಪ್ರಕ್ರಿಯೆಗೆ ಬದಲಾವಣೆಗಳು ಅಗತ್ಯ: ಸಚಿವ ಡಾ.ಭಾಂಬ್ರೆ

Update: 2018-02-27 14:54 GMT

ಹೊಸದಿಲ್ಲಿ,ಫೆ.27: ಶಸ್ತ್ರಾಸ್ತ್ರ ಖರೀದಿ ವ್ಯವಸ್ಥೆಯು ದಿಕ್ಕಾಪಾಲಾಗಿ ಹಂಚಿಹೋಗಿರುವದನ್ನು ಕಂಡು ಬೇಸತ್ತಿರುವ ಕೇಂದ್ರ ಸಹಾಯಕ ರಕ್ಷಣಾ ಸಚಿವ ಡಾ.ಸುಭಾಷ್ ಭಾಂಬ್ರೆ ಅವರು ರಕ್ಷಣಾ ಖರೀದಿ ಒಪ್ಪಂದವೊಂದನ್ನು ಪ್ರಕಟಿಸುವ ಮುಂಚಿನ ಒಂಭತ್ತು ಹಂತಗಳಲ್ಲಿ ಪ್ರತಿಯೊಂದರಲ್ಲಿಯೂ ಸರಣಿ ಸುಧಾರಣೆಗಳನ್ನು ಶಿಫಾರಸು ಮಾಡಿದ್ದಾರೆ. ನೀತಿಯಲ್ಲಿ ನಿಷ್ಕ್ರಿಯತೆಯ ಬದಲಾಗಿ ಸಮಯಪ್ರಜ್ಞೆಯಿಂದ ಕೂಡಿರಬೇಕು ಎಂದಿರುವ ಅವರು, ಸೂಕ್ಷ್ಮ ಪರಿಶೀಲನೆಯು ಖರೀದಿಯಲ್ಲಿ ಬೃಹತ್ ವಿಳಂಬಗಳಿಗೆ ನೆಪವಾಗಬಾರದು ಎಂದು ಹೇಳಿದ್ದಾರೆ.

ತನ್ನ ಸಚಿವಾಲಯವು ಬಹು ಮತ್ತು ಹರಡಿಕೊಂಡಿರುವ ವ್ಯವಸ್ಥೆಗಳಿಂದ ತುಂಬಿ ಹೋಗಿದ್ದು, ಏಕೈಕ ಉತ್ತರದಾಯಿತ್ವವಿಲ್ಲ. ನಿರ್ಣಯಗಳನ್ನು ಕೈಗೊಳ್ಳಲು ಹಲವಾರು ಮುಖ್ಯಸ್ಥರಿದ್ದಾರೆ. ಪ್ರಕ್ರಿಯೆಗಳು ಪುನರಾವರ್ತನೆಗೊಳ್ಳುತ್ತಿರುತ್ತವೆ. ಒಂದೇ ಕೆಲಸವನ್ನು ಹಲವರು ಪದೇಪದೇ ಮಾಡುತ್ತಿರುತ್ತಾರೆ. ಷರಾಗಳಲ್ಲಿ ವಿಳಂಬಗಳು, ವಿಳಂಬಿತ ನಿರ್ಧಾರಗಳು, ಕಾರ್ಯಾರಂಭದಲ್ಲಿ ವಿಳಂಬ, ನಿಜಾವಧಿಯ ನಿಗಾಯಿರದಿರುವಿಕೆ ಇತ್ಯಾದಿಗಳು ಹೆಜ್ಜೆಹೆಜ್ಜೆಗೂ ಕಾಣುತ್ತಿವೆ. ಇದರ ಪರಿಣಾಮವಾಗಿ ಕಳೆದ ಮೂರು ವರ್ಷಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿರುವ 144 ಖರೀದಿ ಯೋಜನೆಗಳ ಪೈಕಿ ಕೇವಲ ಶೇ.8ರಿಂದ ಶೇ.10ರಷ್ಟು ಮಾತ್ರ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿವೆ ಎಂದು ಭಾಂಬ್ರೆ ವಿಷಾದಿಸಿದ್ದಾರೆ.

ಪ್ರಮುಖ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಸರಕಾರವು ಒಂಭತ್ತು ಹಂತಗಳನ್ನು ಪಾಲಿಸುತ್ತದೆ. ಬೃಹತ್ ಖರೀದಿ ಯೋಜಜನೆಯಿದ್ದಲ್ಲಿ ಈ ಹಂತಗಳು ಪೂರ್ಣಗೊಂಡು ಹಸಿರು ನಿಶಾನೆ ದೊರೆಯುವಾಗ ದಶಕಕ್ಕೂ ಹೆಚ್ಚಿನ ಸಮಯ ಕಳೆದುಹೋಗಿರುತ್ತದೆ. ಇದರಿಂದಾಗಿ ಆಧುನಿಕ ಯುದ್ಧಕ್ಕೆ ಸಜ್ಜಾಗುವಾಗ ಭಾರತೀಯ ಸಶಸ್ತ್ರ ಪಡೆಗಳು ಹಳೆಯ ಶಸ್ತ್ರಾಸ್ತ್ರಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ ಎಂದಿರುವ ಅವರು, 2001ರಲ್ಲಿ ಮೊದಲು ಪ್ರಸ್ತಾಪಿಸಲಾಗಿದ್ದ 126 ಯುದ್ಧವಿಮಾನಗಳಿಗಾಗಿ ವಾಯುಪಡೆಯ ಬೇಡಿಕೆಯು ಇಂತಹ ನಿಧಾನ ಪ್ರಕ್ರಿಯೆಗೆ ಉತ್ತಮ ಉದಾಹರಣೆಯಾಗಿದೆ. 17 ವರ್ಷಗಳ ಬಳಿಕ ಕೇವಲ 36 ಫ್ರೆಂಚ್ ರಾಫೇಲ್ ಯುದ್ಧವಿಮಾನಗಳ ಖರೀದಿಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ, ಆದರೆ ಈವರೆಗೂ ಒಂದೂ ವಿಮಾನ ಪೂರೈಕೆಯಾಗಿಲ್ಲ ಎಂದು ಬೆಟ್ಟು ಮಾಡಿದ್ದಾರೆ.

 ಕಳೆದ ವರ್ಷದ ನವೆಂಬರ್‌ನಲ್ಲಿ 27 ಅಂಶಗಳ ಆಂತರಿಕ ವರದಿಯಲ್ಲಿ ಭಾಂಬ್ರೆ ಈ ವಿಷಯಗಳನ್ನು ಎತ್ತಿದ್ದಾರೆ. ರಕ್ಷಣಾ ಸಚಿವಾಲಯದಲ್ಲಿ ಪ್ರಸ್ತಾವಕ್ಕಾಗಿ ಮನವಿಯ ಹಂತದಲ್ಲಿ ಖರೀದಿ ಪ್ರಕ್ರಿಯೆಯ ಆರಂಭದ ಮಜಲುಗಳಲ್ಲಿ ಪದೇಪದೇ ವಿಳಂಬಗಳಾಗುತ್ತಿರುವುದನ್ನೂ ಅವರು ಎತ್ತಿ ತೋರಿಸಿದ್ದಾರೆ. ಹಲವಾರು ಹಂತಗಳಲ್ಲಿ ರಕ್ಷಣಾ ಖರೀದಿಯ ನಿಯಮಾವಳಿಗಳು ಅನುಮತಿಸಿರುವ ಸಮಯಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಸಮಯವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News