ಹೊನ್ನಾವರ: 42 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿ

Update: 2018-02-27 17:23 GMT

ಹೊನ್ನಾವರ,ಫೆ.27: ತಾಲೂಕಿನ ಕಡ್ನೀರದಲ್ಲಿ ಅರಣ್ಯ ಪ್ರದೇಶಕ್ಕೆ ಮಂಗಳವಾರ ಬೆಂಕಿ ತಗುಲಿದ ಪರಿಣಾಮ ಸುಮಾರು 42 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಬೆಲೆಬಾಳುವ ಸಾಗವಾನಿ ಸೇರಿದಂತೆ ವಿವಿಧ ಜಾತಿಯ ಮರಗಳು ಹಾಗೂ ವನ್ಯಜೀವಿ ಸಂಕುಲಗಳು ಬೆಂಕಿಯ ಕೆನ್ನಾಲೆಗೆ ಆಹುತಿಯಾಗಿವೆ. 

ಕಳೆದ ಶನಿವಾರ ಮಧ್ಯಾಹ್ನ ಕಡ್ನೀರು ಭಾಗದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅರಣ್ಯದಲ್ಲಿ ಸಾಗವಾನಿ ಹಾಗೂ ಇತರೆ ಜಾತಿಯ ಮರದ ತರಗೆಲೆಗಳು ನೆಲಹಾಸಿ ಬಿದ್ದಿದ್ದರಿಂದ ಬೆಂಕಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಈ ಕುರಿತು ಸ್ಥಳೀಯರು ಶನಿವಾರ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಮೂರು ದಿನಗಳ ಕಾಲ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅರಣ್ಯದಲ್ಲಿ ಕಾಣಿಸಿಕೊಂಡಿರುವ ಬೆಂಕಿಯನ್ನು ನಂದಿಸಿದ್ದರು. ಆದರೆ ಸೋಮವಾರ ತಡರಾತ್ರಿ ಮತ್ತೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಂಗಳವಾರ ಇನ್ನೂ ವಿಸ್ತರಿಸಿ ಸುಮಾರು 42 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

ಸ್ಥಳಕ್ಕಾಗಮಿಸಿದ ಉಪ ವಲಯ ಅರಣ್ಯಾಧಿಕಾರಿ ರಾಜೇಶ. ಎಂ ಕೊಚರೇಕರ್, ವಲಯ ಅರಣ್ಯಾಧಿಕಾರಿ ವರದರಂಗನಾಥ, ಅರಣ್ಯ ರಕ್ಷಕರು, ಅರಣ್ಯ ವೀಕ್ಷಕರು, ಗ್ರಾಮ ಅರಣ್ಯ ಸಮಿತಿಯ ಪ್ರಮುಖರು ಹಾಗೂ ಊರಿನವರು ಸೇರಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಅರಣ್ಯ ಸಿಬ್ಬಂದಿಗಳು ಅರಣ್ಯದಲ್ಲಿ ಬಿದ್ದಿರುವ ತರಗೆಲೆಗಳನ್ನು ಬೆಂಕಿ ತಗುಲದಂತೆ ಬೇರ್ಪಡಿಸಿದರು. ಸ್ಥಳೀಯರು ಬೆಂಕಿ ನಂದಿಸುವಲ್ಲಿ ಮುಂದಾದರು. ಕೋಟ್ಯಾಂತರ ರೂ. ಮೌಲ್ಯದ ಸಾಗವಾನಿ ಮತ್ತು ಇತರೆ ಜಾತಿಯ ಸಸಿಗಳು ಹಾಗೂ ಅರಣ್ಯ ಸಂಪತ್ತು ನಾಶವಾಗಿದ್ದಲ್ಲದೇ ಹಿಂಡು ಪೊದೆಗಳಲ್ಲಿ ವಾಸವಾಗಿರುವ ಪ್ರಾಣಿ ಪಕ್ಷಿಗಳು ಅಪಾಯಕ್ಕೆ ಸಿಲುಕಿವೆ. ಸಂತಾನೋತ್ಪತ್ತಿ ನಡೆಸಲಾರಂಭಿಸಿರುವ ಹಕ್ಕಿ ಪಕ್ಷಿಗಳ ಮೊಟ್ಟೆ ಹಾಗೂ ಮರಿಗಳು ಬೆಂಕಿಗೆ ಸುಟ್ಟು ಭಸ್ಮವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News