ಬೆಂಗಳೂರು; ಉ.ಕನ್ನಡ ಜಿಲ್ಲೆಯ ಪ್ರವಾಸ ತಾಣಗಳನ್ನೊಳಗೊಂಡ ‘ಈ ಕಾಫಿ ಟೇಬಲ್’ ಪುಸ್ತಕ ಬಿಡುಗಡೆ

Update: 2018-02-27 18:11 GMT

ಬೆಂಗಳೂರು, ಫೆ.27: ಪ್ರಕೃತಿ, ಜಲಪಾತ, ಸಸ್ಯವರ್ಗ, ಆಹಾರಪದ್ಧತಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಸುಂದರ ತಾಣಗಳ ವಿವರಗಳನ್ನೊಳಗೊಂಡ ‘ಈ ಕಾಫಿ ಟೇಬಲ್’ ಪುಸ್ತಕವನ್ನು ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಬಿಡುಗಡೆ ಮಾಡಿದರು.

ಮಂಗಳವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಕೃತಿಯನ್ನು ಬಿಡುಗಡೆಗೊಳಿಸಿ, ರಾಜ್ಯದ ಅತಿ ಉದ್ದದ ಸಮುದ್ರ ತೀರವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯು ಹಲವಾರು ಪ್ರವಾಸಿ ಸ್ಥಳಗಳನ್ನು ಹೊಂದಿದೆ. ವೈವಿಧ್ಯಮಯ ಸಂಸ್ಕೃತಿ, ಆಹಾರ ಪದ್ಧತಿ, ಪ್ರೇಕ್ಷಣೀಯ ಸ್ಥಳಗಳಿಂದ ಪ್ರವಾಸಿಗರಿಗೆ ಅದ್ಭುತ ಅನುಭವ ಕೊಡಲಿದೆ. ಹೀಗೆ ಜಿಲ್ಲೆ ಪ್ರತಿ ಆಯಾಮಗಳನ್ನು ಎಳೆ ಎಳೆಯಾಗಿ ಜನರಿಗೆ ಪರಿಚಯಿಸುವ ಉದ್ದೇಶದಿಂದ ಪುಸ್ತಕವನ್ನು ಹೊರ ತರಲಾಗಿದೆ.

ಈ ಪುಸ್ತಕವು 124 ಪುಟಗಳನ್ನು ಹೊಂದಿದ್ದು, ಜಲಪಾತಗಳು, ಸಸ್ಯವರ್ಗ, ಸಿಂಗಳೀಕ, ಕಪ್ಪು ಚಿರತೆ, ಪ್ರಾಣಿ-ಪಕ್ಷಿ ವರ್ಗ, ಪಶ್ಚಿಮ ಘಟ್ಟಗಳ ಅದ್ಭುತ ಕಾಡುಗಳ ಅತಿ ಸುಂದರ ಚಿತ್ರ ಮತ್ತು ಮಾಹಿತಿಯು ಪುಸ್ತಕದಲ್ಲಿದೆ. ಪುಸ್ತಕವನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಪೇಪರ್ ಮತ್ತು ಬೈಂಡಿಂಗ್ ತಂತ್ರಗಳಿಂದ ತಯಾರಿಸಲಾಗಿದ್ದು, ಎಲ್ಲಾ ಚಿತ್ರಗಳು ರಾಜ್ಯದ ಪ್ರಸಿದ್ಧ ಛಾಯಾಗ್ರಾಹಕರು ಕಳೆದ 10 ವರ್ಷದಲ್ಲಿ ತೆಗೆದ ಚಿತ್ರಗಳಾಗಿವೆ ಎಂದು ಅವರು ಮಾಹಿತಿ ನೀಡಿದರು.

ಪುಸ್ತಕದಲ್ಲಿ ಗ್ರೇಟ್ ಇಂಡಿಯನ್ ಹಾರ್ನ್ಬಿಲ್, ಸಿಂಗಳೀಕ, ಕಪ್ಪು ಚಿರತೆ, ಮೊಸಳೆ ಇತ್ಯಾದಿ ಪ್ರಾಣಿ-ಪಕ್ಷಿ ವರ್ಗಗಳ ಸುಂದರ ಚಿತ್ರಗಳು ನೋಡುಗನ ಕಣ್ಮನ ಸೆಳೆಯುತ್ತವೆ. ಹಬ್ಬಗಳು, ಜಾತ್ರೆಗಳು, ಜನಪದ ಆಚರಣೆಗಳು ಆಹಾರ ಪದ್ಧತಿ ಇತ್ಯಾದಿಗಳ ಪರಿಚಯವನ್ನು ಸಹ ಮಾಡಿಕೊಡಲಾಗಿದೆ. ಜಿಲ್ಲೆಯ ಜನರ ವೃತ್ತಿ ವೈವಿಧ್ಯಮಗಳು, ಬುಡಕಟ್ಟು ಜನಾಂಗಗಳು, ಜೀವನಶೈಲಿಗಳನ್ನು ಚಿತ್ರದ ಮೂಲಕ ತೋರಿಸಿಕೊಡಲಾಗಿದೆ. ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಕ್ಕೆ ಹೋಗುವವರಿಗೆ ಉತ್ತಮ ಕೈಪಿಡಿಯಾಗಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News