ಹಿಂಬದಿ ಸವಾರರಿಗಾಗಿ ಸಾರಿಗಾರ್ಡ್, ಹ್ಯಾಂಡ್‌ಗ್ರಿಪ್ ಅಳವಡಿಸುವುದು ಕಡ್ಡಾಯ

Update: 2018-02-28 04:23 GMT

ಹೊಸದಿಲ್ಲಿ, ಫೆ. 28: ದ್ವಿಚಕ್ರ ವಾಹನ ಉತ್ಪಾದಕರು ಇನ್ನು ಮುಂದೆ ಹಿಂಬದಿ ಸವಾರರಿಗಾಗಿ ಸುರಕ್ಷಾ ಸಾಧನಗಳಾದ ಸಾರಿಗಾರ್ಡ್ ಮತ್ತು ಹ್ಯಾಂಡ್‌ಗ್ರಿಪ್ ಅಳವಡಿಸುವುದನ್ನು ಕಡ್ಡಾಯಪಡಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

ಇಂಥ ಸುರಕ್ಷಾ ಸಾಧನಗಳಿಲ್ಲದ ದ್ವಿಚಕ್ರ ವಾಹನಗಳನ್ನು ನೋಂದಣಿ ಮಾಡುವುದನ್ನು ನಿಷೇಧಿಸಿ 2008ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಈ ಆದೇಶವನ್ನು ಮಧ್ಯಪ್ರದೇಶ ಸರ್ಕಾರ 2008ರ ನವೆಂಬರ್ 25ರಂದು ಹೊರಡಿಸಿದ್ದರೂ, ಕೆಲವೇ ವಾರಗಳಲ್ಲು ಸುಪ್ರೀಂಕೋರ್ಟ್ ಇದಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಭಾರತೀಯ ಆಟೊಮೊಬೈಲ್ ಉತ್ಪಾದಕರ ಸೊಸೈಟಿ, ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿತ್ತು.

ಇದೀಗ ನ್ಯಾಯಮೂರ್ತಿಗಳಾದ ಎ.ಕೆ.ಗೋಯಲ್ ಹಾಗೂ ಯು.ಯು.ಲಲಿತ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಅರ್ಜಿಯನ್ನು ತಿರಸ್ಕರಿಸಿ, "ಸೊಸೈಟಿ ಸಲ್ಲಿಸಿದ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ" ಎಂದು ಸ್ಪಷ್ಟಪಡಿಸಿದೆ. ಮೋಟಾರು ವಾಹನ ನಿಯಮಾವಳಿಯ 123ನೇ ನಿಯಮದ ಅನ್ವಯ ಹಿಂಬದಿ ಸವಾರರಿಗೆ ಕೂಡಾ ಸುರಕ್ಷಾ ಸಾಧನಗಳನ್ನು ಕಡ್ಡಾಯಪಡಿಸಿರುವುದನ್ನು ಕೋರ್ಟ್ ಎತ್ತಿಹಿಡಿದಿದೆ. ಇಂಥ ವಾಹನಗಳು ಫ್ಯಾಕ್ಟರಿಯಿಂದ ಹೊರಬರುವ ಮುನ್ನವೇ ಇದನ್ನು ಅಳವಡಿಸುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದೆ.

ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಮೃತಪಡುವ ಮೂರನೇ ಎರಡರಷ್ಟು ಮಂದಿ ದ್ವಿಚಕ್ರ ವಾಹನ ಸವಾರರು. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2015ರಲ್ಲಿ ದೇಶದಲ್ಲಿ 46070 ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಮೃತಪಟ್ಟಿದ್ದರೆ, ಕಳೆದ ವರ್ಷ ಈ ಸಂಖ್ಯೆ 52500ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News