ಮದ್ರಾಸ್ ಐಐಟಿ ವಿರುದ್ಧ ಕಮಲ್ ಆಕ್ರೋಶ

Update: 2018-02-28 07:12 GMT

ಚೆನ್ನೈ, ಫೆ.28: ಸೋಮವಾರ ನಡೆದ ಮದ್ರಾಸ್ ಐಐಟಿಯ ಸಮಾರಂಭವೊಂದರಲ್ಲಿ ಸಂಸ್ಕೃತ ಭಾಷೆಯ ಪ್ರಾರ್ಥನೆಯನ್ನು ಹಾಡಿರುವುದಕ್ಕೆ ನಟ, ರಾಜಕಾರಣಿ ಕಮಲ್ ಹಾಸನ್ ಸಿಡಿಮಿಡಿಗೊಂಡಿದ್ದಾರೆ. ಈ ಸರಕಾರಿ ಸಮಾರಂಭಧಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ಸಹಾಯಕ ಸಚಿವ ಪೊನ್ ರಾಧಾಕೃಷ್ಣನ್ ಭಾಗವಹಿಸಿದ್ದರು.

"ತಮಿಳುನಾಡಿನಲ್ಲಿ ತಮಿಳು ನಾಡಗೀತೆ ಅಥವಾ ಪ್ರಾರ್ಥನಾ ಹಾಡು ಹಾಡಬೇಕು, ಆದರೆ ಅಲ್ಲಿ ಹಾಡಲಾದ ಹಾಡು (ಧಾರ್ಮಿಕ) ಖಂಡನಾರ್ಹ'' ಎಂದು ಕಮಲ್ ಹೇಳಿದ್ದಾರೆ.

ರಾಜ್ಯದ ಸರಕಾರಿ ಸಮಾರಂಭಗಳಲ್ಲಿ ಮನೋಮನಿಯಂ ಸುಂದರಂ ಪಿಳ್ಳೈ ಅವರು ರಚಿಸಿರುವ 'ತಮಿಳು ತಾಯ್ ವಝ್‍ತ್ತು' (ತಮಿಳು ಮಾತೆಯ ಪ್ರಾರ್ಥನಾ ಹಾಡು) ಆರಂಭದಲ್ಲಿ ಹಾಡಿ ನಂತರ ಸಮಾರಂಭದ ಅಂತ್ಯಕ್ಕೆ ರಾಷ್ಟ್ರಗೀತೆ ಹಾಡಲಾಗುತ್ತದೆ. ಆದರೆ ಸೋಮವಾರದ ಸಮಾರಂಭದಲ್ಲಿ ಅತಿಥಿಗಳು ಆಗಮಿಸುತ್ತಿದ್ದಂತೆಯೇ ವಿದ್ಯಾರ್ಥಿಗಳು  ದಿವಂಗತ ಕವಿ ಮುತ್ತು ಸ್ವಾಮಿ ದೀಕ್ಷಿತರ್ ಅವರು ರಚಿಸಿರುವ 'ಮಹಾಗಣಪತಿಂ ಮನಸಾ ಸ್ಮರಾಮಿ' ಹಾಡನ್ನು ಹಾಡಿದರು. ಐಐಟಿಯ ಜತೆಗೆ ಕಾರ್ಯನಿರ್ವಹಿಸಲಿರುವ ನ್ಯಾಷನಲ್ ಟೆಕ್ನಾಲಜಿ ಸೆಂಟರ್ ಫಾರ್ ಪೋರ್ಟ್ಸ್, ವಾಟರ್ ವೇಸ್ ಆ್ಯಂಡ್ ಕೋಸ್ಟ್ಸ್ ಶಿಲಾನ್ಯಾಸ ನೆರವೇರಿಸುವ ಸಲುವಾಗ ಈ ಸಮಾರಂಭ ಆಯೋಜಿಸಲಾಗಿತ್ತು.

ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ  ಐಐಟಿ ಮದ್ರಾಸ್ ನಿರ್ದೇಶಕ ಪ್ರೊ ಭಾಸ್ಕರ್ ರಾಮಮೂರ್ತಿ, "ಸಂಸ್ಕೃತ ಪ್ರಾರ್ಥನೆ ಹಾಡಬೇಕೆಂದು ಯೋಚಿಸಿರಲಿಲ್ಲ.  ವಿದ್ಯಾರ್ಥಿಗಳೇ ಅದನ್ನು ಆರಿಸಿದ್ದರು. ಮುಂದೆ ನಡೆಯುವ ಸಮಾರಂಭಗಳಲ್ಲಿ ತಮಿಳು ಪ್ರಾರ್ಥನಾ ಹಾಡುಗಳನ್ನೇ ಹಾಡಲಾಗುವುದು" ಎಂದಿದ್ದಾರೆ.

ತಮಿಳುನಾಡು ಸಚಿವ ಡಿ. ಜಯಕುಮಾರ್ ಕೂಡ ಸಂಸ್ಕೃತ ಪ್ರಾರ್ಥನಾ ಹಾಡು ಹಾಡಿರುವುದಕ್ಕೆ ಆಕ್ಷೇಪ ಸೂಚಿಸಿದ್ದಾರೆ. ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನು ಗಾಳಿಗೆ ತೂರುವುದನ್ನು ಅಮ್ಮ ಸರಕಾರ ಸಹಿಸದು ಎಂದು ಅವರು ಹೇಳಿದ್ದಾರೆ.

ಮಂಗಳವಾರ ಐಐಟಿಯ ಕೆಲ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡು ಹಿಂದಿ ಮತ್ತು ಸಂಸ್ಕೃತ ಹಾಡುಗಳನ್ನು ಸರಕಾರಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಹೇರುವುದನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News