ತನ್ನ ಕಾಳಜಿಯನ್ನು ಅಪಹಾಸ್ಯ ಮಾಡಿದ ಟ್ರೋಲ್ ಗಳಿಗೆ ಇಶಾ ಗುಪ್ತಾ ಚಾಟಿ ಬೀಸಿದ್ದು ಹೀಗೆ...

Update: 2018-02-28 10:28 GMT

ಮುಂಬೈ, ಫೆ.28: ಇತ್ತೀಚೆಗೆ ಸಿರಿಯಾ ಬಿಕ್ಕಟ್ಟಿನ ಬಗ್ಗೆ ಟ್ವೀಟ್ ಮಾಡಿದ್ದ ಇಶಾ ಗುಪ್ತಾರನ್ನು ಕೆಲವರು ಟ್ವಿಟರ್ ನಲ್ಲಿ ಟ್ರೋಲ್ ಮಾಡಿದ್ದರು. ಇಶಾ ಟ್ವೀಟ್ ಮಾಡಿದ್ದ ನಂತರ ಎಂದಿನಂತೆ ತಮ್ಮ ಚಾಳಿಯನ್ನು ಮುಂದುವರಿಸಿದ ಟ್ರೋಲ್ ಗಳು ಇಶಾ ಗುಪ್ತಾರ ಕಾಲೆಳೆಯ ತೊಡಗಿದ್ದರು. ಇವೆಲ್ಲದಕ್ಕೆ ಉತ್ತರವಾಗಿ ಇಶಾ ಮಾಡಿರುವ ಟ್ವೀಟೊಂದು ಇದೀಗ ಟ್ವಿಟರಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಸಿರಿಯಾದ ಪೂರ್ವ ಘೌಟಾ ಎಂಬಲ್ಲಿ ನಡೆಯುತ್ತಿರುವ ದಾಳಿಗಳಲ್ಲಿ 127 ಮಕ್ಕಳು ಸೇರಿದಂತೆ ಕನಿಷ್ಠ 510 ಜನರು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಗಾಯಗೊಂಡಿದ್ದ ಮಗುವಿನ ಚಿತ್ರವೊಂದನ್ನೂ ಪೋಸ್ಟ್ ಮಾಡಿದ್ದ ಇಶಾ "ನನ್ನ ದೇಶ, ಧರ್ಮ ಅಥವಾ ಸರಕಾರ ಯಾವುದಾದರೂ ಚಿಂತೆಯಿಲ್ಲ. ಮಾನವೀಯತೆ ಸಾಯುತ್ತಿದೆ. ಮಕ್ಕಳು ಸಾಯುತ್ತಿದ್ದಾರೆ. ಇದಕ್ಕೆ ಅಂತ್ಯ ಹಾಡಬೇಕಿದೆ. ಸಿರಿಯಾ ರಕ್ತ ಸುರಿಸುತ್ತಿದೆ'' ಎಂದು ಟ್ವೀಟ್ ಮಾಡಿದ್ದರು.

ಆದರೆ ಕೆಲವರು ಇಶಾ ವಿರುದ್ಧವೇ ಟ್ವೀಟ್ ಮಾಡಲು ಆರಂಭಿಸಿದ್ದರು. "ನೀವೇಕೆ ಸಿರಿಯಾಕ್ಕೆ ಹೋಗಿ ಅಲ್ಲಿ ನಿಮ್ಮಿಂದಾದಷ್ಟು ಸಹಾಯ ಮಾಡಬಾರದು?, ಎಸಿ ಕೊಠಡಿಯಲ್ಲಿ ಕುಳಿತು ಭಾಷಣ ನೀಡುವುದು ಸುಲಭ, ನಾನು ನೀವಾಗಿದ್ದರೆ ಅಲ್ಲಿಗೆ ಹೋಗಿ ಸಹಾಯ ಮಾಡುತ್ತಿದ್ದೆ'' ಎಂದು ಅಮರಜೀತ್ ಕೌರ್ ಎಂಬವರು ಪ್ರತಿಕ್ರಿಯಿಸಿದ್ದರೆ, "ಭಾರತದ ಮಕ್ಕಳು ಕೂಡ ವ್ಯವಸ್ಥೆಯ ವೈಫಲ್ಯದಿಂದ ಸಮಸ್ಯೆಗೊಳಗಾಗಿದ್ದಾರೆ. ಮಾನವತೆಗಾಗಿ ಶ್ರಮಿಸಿ, ನಿಮ್ಮ ದೇಶದಿಂದಲೇ ಆರಂಭಿಸಿ'' ಎಂದು ರಿಂಕು ಗುಪ್ತಾ ಎಂಬವರು ಹೇಳಿದ್ದರು. 

ರಜಪೂತ್ ಎಂಬವರು ಟ್ವೀಟ್ ಮಾಡಿ, "ಒಂದೇ ಟ್ವೀಟ್ ನಿಂದ ದಶಕಗಳ ಹಿಂದಿನ ಕಲಹವನ್ನು ನಿಲ್ಲಿಸುವುದು!, ಟ್ವೀಟ್, ಪೋಸ್ಟ್, ಬ್ಲಾಗ್ ಗಳ ಮೂಲಕ ಸಮಸ್ಯೆಯನ್ನು ಪರಿಹರಿಸುವ ಕಲೆ ಬಾಲಿವುಡ್ ಗೆ ಮಾತ್ರ ತಿಳಿದಿದೆ" ಎಂದಿದ್ದರು. 

ಈ ಎಲ್ಲಾ ಟ್ರೋಲ್ ಗಳಿಗೆ ಉತ್ತರವಾಗಿ ಇಶಾ, "ನೀವು ಟ್ರೋಲ್ ಗಳು ಯಾವುದಕ್ಕೂ ತಕ್ಕವರಲ್ಲ, ಮಾನವೀಯತೆಯ ವಿಚಾರ ಬಂದಾಗಲೂ ನೀವು ಗಡಿಗಳನ್ನೇ ನೋಡುತ್ತೀರಿ. ಮಕ್ಕಳ ವಿಚಾರ ಬಂದಾಗಲೂ ಧರ್ಮ ನೋಡುತ್ತೀರಿ. ಇದಕ್ಕೆಂದೇ ಹೇಳುವುದು ಕರಾಳ ಯುಗ'' ಎಂದು ಟ್ವೀಟ್ ಮಾಡಿದ್ದಾರೆ. ಇಶಾ ಗುಪ್ತಾರ ಈ ಟ್ವೀಟ್ ಟ್ವಿಟರಿಗರ ಮೆಚ್ಚುಗೆಗೂ ಪಾತ್ರವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News