ಸಂಸದರ ಭತ್ತೆ ಏರಿಕೆಗೆ ಸಂಪುಟ ಒಪ್ಪಿಗೆ

Update: 2018-02-28 16:34 GMT

ಹೊಸದಿಲ್ಲಿ, ಫೆ.28: ಸಂಸತ್ ಸದಸ್ಯರ ಭತ್ಯೆಗಳನ್ನು ಏರಿಸುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟವು ಬುಧವಾರದಂದು ಒಪ್ಪಿಗೆ ಸೂಚಿಸಿದೆ. ಆ ಮೂಲಕ ಸಂಸದರ ಕ್ಷೇತ್ರ ಭತ್ತೆ, ಪೀಠೋಪಕರಣ ಭತ್ತೆ ಹಾಗೂ ಸಂಭಾಷಣೆ ಭತ್ತೆಯಲ್ಲಿ ಗಣನೀಯ ಏರಿಕೆಯಾಗಲಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಸಂಸದರಿಗೆ ನೀಡಲಾಗುವ ಕ್ಷೇತ್ರ ಭತ್ತೆಯನ್ನು ಈಗಿನ 45,000 ರೂ.ನಿಂದ 60,000 ರೂ.ಗೆ ಹಾಗೂ ಒಂದು ಬಾರಿ ನೀಡಲಾಗುವ ಪೀಠೋಪಕರಣ ಭತ್ತೆಯನ್ನು 75,000 ರೂ.ನಿಂದ ಒಂದು ಲಕ್ಷ ರೂ.ಗೆ ಏರಿಸುವ ಪ್ರಸ್ತಾವವನ್ನು ಸಂಸದೀಯ ವ್ಯವಹಾರಗಳ ಸಚಿವಾಲಯ ಸಲ್ಲಿಸಿದೆ. ಸಂಸದರ ವೇತನವನ್ನು ಪ್ರತೀ ಐದು ವರ್ಷಕ್ಕೊಮ್ಮೆ ಹಣದುಬ್ಬರದ ಆಧಾರದಲ್ಲಿ ಪರಿಷ್ಕರಿಸಲು ಶಾಶ್ವತ ಸಮಿತಿಯೊಂದನ್ನು ರಚಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದರು.

ಸಂಸದರು ಪಡೆಯುವ ಸಂಭಾವನೆಯಲ್ಲಿ ಪ್ರತೀ ತಿಂಗಳು 50,000 ರೂ. ವೇತನ ಹಾಗೂ 45,000 ರೂ. ಕ್ಷೇತ್ರ ಭತ್ಯೆ ಸೇರಿದೆ. ಇದರ ಜೊತೆಗೆ ಇತರ ಹಲವು ಭತ್ಯೆಗಳು ಸಂಸದರಿಗೆ ನೀಡಲಾಗುತ್ತದೆ. ಕೇಂದ್ರವು ಓರ್ವ ಸಂಸದನ ಮೇಲೆ ಪ್ರತೀ ತಿಂಗಳು 2.7 ಲಕ್ಷ ರೂ. ವೆಚ್ಚ ಮಾಡುತ್ತದೆ. ಸದ್ಯ, ಸ್ಪೀಕರ್ ಹೊರತುಪಡಿಸಿ ಲೋಕಸಭೆಯಲ್ಲಿ ಇಬ್ಬರು ಆಂಗ್ಲೊ-ಇಂಡಿಯನ್ ಸಮುದಾಯದಿಂದ ನಾಮಾಂಕಿತಗೊಂಡ ಸಂಸದರನ್ನೂ ಸೇರಿಸಿ 536 ಸಂಸದರಿದ್ದಾರೆ. ರಾಜ್ಯಸಭೆಯಲ್ಲಿ 239 ಸದಸ್ಯರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News