ಅಯೋಧ್ಯೆ ವಿವಾದ ಕೋರ್ಟ್‌ನಲ್ಲಿ ಬಗೆಹರಿಯದು : ರವಿಶಂಕರ್

Update: 2018-02-28 16:39 GMT

ಅಯೋಧ್ಯೆ, ಫೆ.28: ರಾಮಜನ್ಮಭೂಮಿ- ಬಾಬರಿ ಮಸೀದಿ ವಿವಾದ ನ್ಯಾಯಾಲಯದಲ್ಲಿ ಬಗೆಹರಿಯುವ ಸಂಭವವಿಲ್ಲ ಎಂದಿರುವ ಆಧ್ಯಾತ್ಮಿಕ ಗುರು ಹಾಗೂ ‘ಆರ್ಟ್ ಆಫ್ ಲಿವಿಂಗ್’ನ ಸ್ಥಾಪಕ ರವಿಶಂಕರ್, ನ್ಯಾಯಾಲಯದಲ್ಲಿ ಸೋತ ಪಕ್ಷವು ಆರಂಭದಲ್ಲಿ ತೀರ್ಪನ್ನು ಒಪ್ಪಿಕೊಂಡರೂ ಬಳಿಕ ಈ ಕುರಿತು ತಕರಾರು ಎಬ್ಬಿಸುತ್ತದೆ ಎಂದಿದ್ದಾರೆ.

ಈ ಸಮಸ್ಯೆಗೆ ನ್ಯಾಯಾಲಯದ ಹೊರಗೆ ಸೌಹಾರ್ದಯುತ ಪರಿಹಾರ ಹುಡುಕುವುದು ಅತ್ಯುತ್ತಮ ಮಾರ್ಗವಾಗಿದೆ ಎಂದು ರವಿಶಂಕರ್ ಹೇಳಿದರು. ತಮ್ಮನ್ನು ಟೀಕಿಸುವವರಿಗೆ ಇದಿರೇಟು ನೀಡಿದ ಅವರು, ಎಲ್ಲರಿಗೂ ತಮಗಿರುವ ತಿಳುವಳಿಕೆಯ ಕೊರತೆಯನ್ನು ಪ್ರದರ್ಶಿಸುವ ಅಧಿಕಾರವಿದೆ ಎಂದು ಪ್ರತಿಕ್ರಿಯಿಸಿದರು. ಅಯೋಧ್ಯೆ ವಿವಾದಕ್ಕೆ ನ್ಯಾಯಾಲಯದ ಹೊರಗೆ ಸೌಹಾರ್ದಯುತ ಪರಿಹಾರ ಹುಡುಕುವ ರವಿಶಂಕರ್ ಪ್ರಯತ್ನಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿದೆ. ಅಯೋಧ್ಯೆ ವಿವಾದದ ಪ್ರಕರಣದಿಂದ ದೂರ ಇರುವಂತೆ ಬಾಬರಿ ಕ್ರಿಯಾ ಸಮಿತಿ ರವಿಶಂಕರ್‌ಗೆ ಸೂಚಿಸಿದ್ದರೆ, ಈ ವಿವಾದದಲ್ಲಿ ಸಂಧಾನಕಾರ ಪಾತ್ರ ವಹಿಸುವ ರವಿಶಂಕರ್ ಪ್ರಸ್ತಾವವನ್ನು ಹಲವು ರಾಜಕೀಯ ಮುಖಂಡರು ತಳ್ಳಿಹಾಕಿದ್ದಾರೆ.

 ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದಕ್ಕೆ ಬಹುತೇಕ ಮುಸ್ಲಿಮರ ವಿರೋಧವಿಲ್ಲ . ಕೆಲವೊಮ್ಮೆ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೇ ಇಲ್ಲ ಎಂಬ ಭಾವನೆ ಇರುತ್ತದೆ. ಆದರೆ ಉಭಯ ಸಮುದಾಯದ ಜನತೆ, ಯುವಜನತೆ ಹಾಗೂ ಮುಖಂಡರು ಪ್ರಯತ್ನಿಸಿದರೆ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ರವಿಶಂಕರ್ ಹೇಳಿದ್ದಾರೆ.

ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದದ ಅಂತಿಮ ವಿಚಾರಣೆಯನ್ನು ಸುಪ್ರೀಂಕೋರ್ಟ್ 2017ರ ಡಿ.5ರಿಂದ ಆರಂಭಿಸಿದೆ.

     ಪ್ರಕರಣದ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್‌ನ ಮೂವರು ಸದಸ್ಯರ ನ್ಯಾಯಪೀಠವು , ಅಯೋಧ್ಯೆಯ ವಿವಾದಾಸ್ಪದ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಹಾಗೂ ರಾಮ್ ಲಲ್ಲ ಸಮಿತಿಗೆ ಸಮಾನವಾಗಿ ಹಂಚಿಕೆ ಮಾಡಿ 2010ರಲ್ಲಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News