ತುಮಕೂರು: ಮನೆ ಕಳ್ಳತನ ಆರೋಪಿಗಳ ಬಂಧನ

Update: 2018-02-28 17:07 GMT

ತುಮಕೂರು,ಫೆ.28: ಒಂಟಿಮನೆಯನ್ನು ಗುರಿಯಾಗಿಸಿಕೊಂಡು ಮನೆಯವರ ಮೇಲೆ ಹಲ್ಲೆ ಮಾಡಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಡಕಾಯಿತರನ್ನು ತಿಲಕ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಫೆ.5ರಂದು ರಾತ್ರಿ ಇಲ್ಲಿಯ ಮಂಜುನಾಥನಗರದಲ್ಲಿ ಮನೆಯೊಂದರಲ್ಲಿ ವಾಸವಾಗಿದ್ದ ಗೌರೀಶ ಎಂಬುವರ ಮನೆಗೆ ನುಗ್ಗಿ ಹಣಕ್ಕಾಗಿ ಹಲ್ಲೆ ನಡೆಸಿ, ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಎಸ್ಪಿ ಡಾ.ದಿವ್ಯ ಗೋಪಿನಾಥ್ ತಿಲಕ್‍ಪಾರ್ಕ್ ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿದ್ದರು.

ಎಎಸ್ಪಿ ಶೋಭಾರಾಣಿ ಮತ್ತು ನಗರ ಡಿವೈಎಸ್ಪಿ ನಾಗರಾಜ್ ನಿರ್ದೇಶನದಲ್ಲಿ ತನಿಖೆ ಕೈಗೊಂಡ ಪೊಲೀಸರು ಫೆ.26ರಂದು ರಾತ್ರಿ ಕೆ.ವಿ.ಉಮೇಶ್(22),ಕೆ.ಎಂಸುಧಾಕರ(23),ಕೆ.ಮೋಹನ್(29), ಕೆ.ಎನ್.ಹರೀಶ (27) ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಕೆ.ವಿ.ಉಮೇಶ್ 2 ಕೊಲೆ ಕೇಸು ಹಾಗೂ ಕಳ್ಳತನಕ್ಕೆ ಪ್ರಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕೆ.ಎಂ.ಸುಧಾಕರ ಕೊಲೆ ಕೇಸಿನಲ್ಲಿ ಆರೋಪಿಯಾಗಿದ್ದು, ಕೆ.ಮೋಹನ್ ಒಂದು ಕೊಲೆ ಹಾಗೂ ಒಂದು ಕಳ್ಳತನ ಪ್ರಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಆರೋಪಿಗಳೆಲ್ಲರೂ ಬೆಂಗಳೂರಿನ ಬಾರ್& ರೆಸ್ಟೋರೆಂಟ್‍ನಲ್ಲಿ ಸಪ್ಲೆಯರ್ ಕೆಲಸ ಹಾಗೂ ಆಟೋ ಡ್ರೈವರ್ ಕೆಲಸ ಮಾಡಿಕೊಂಡಿದ್ದು, ಕುಣಿಗಲ್ ತಾಲೂಕು ಅಮೃತ್ತೂರು ಹೋಬಳಿ ಕುಪ್ಪೆಗ್ರಾಮದವರಾಗಿದ್ದಾರೆ. 

ಬಂಧಿತ ಆರೋಪಿಗಳಿಂದ ಕೆಎ-02-ಜೆಎಫ್-6019 ನಂಬರಿನ ಬಜಾಜ್ ಪಲ್ಸರ್ ದ್ವಿ ಚಕ್ರ ವಾಹನ ಹಾಗೂ ಒಂದು ಸ್ಟೈನ್‍ಲೆಸ್ ಸ್ಟೀಲ್ ಚಾಕು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News