ಬೇಸಿಗೆ ಬೇಗೆ: ಈ ಬಾರಿ ಸುಡುಬಿಸಿಲು ಎದುರಿಸಲು ಸಜ್ಜಾಗಿ..!

Update: 2018-03-01 03:47 GMT

ಹೊಸದಿಲ್ಲಿ, ಮಾ.1: ಬೇಸಿಗೆಯ ಬೇಗೆ ಈ ಬಾರಿ ದೇಶವನ್ನು ಬಹುಬೇಗ ವ್ಯಾಪಿಸಿದೆ. ದೇಶದ ಹಲವು ಭಾಗಗಳಲ್ಲಿ ಉಷ್ಣತಾ ಮಾಪಕದ ಪಾದರಸ ಮಟ್ಟ ಏರುಮುಖಿಯಾಗಿದೆ. ಸಾಮಾನ್ಯ ಸರಾಸರಿಗಿಂತ 2-5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ.
ಈ ವರ್ಷದ ಬೇಸಿಗೆ ಹಿಂದೆಂದಿಗಿಂತಲೂ ಭೀಕರವಾಗಲಿದ್ದು, ಜನ ಮತ್ತು ಬೆಳೆಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.

ಬೇಸಿಗೆ ಮಾಮೂಲಿಗಿಂತ ಬೇಗ ಬಂದಿರುವ ಹಿನ್ನೆಲೆಯಲ್ಲಿ ಬಿಸಿ ಗಾಳಿ ಕೂಡಾ ನಿರೀಕ್ಷೆಗಿಂತ ಬೇಗನೇ ಅಭಿವೃದ್ಧಿ ಹೊಂದುವ ನಿರೀಕ್ಷೆ ಇದೆ. ಮುಂಬೈ, ರಾಯಗಢ ಹಾಗೂ ರತ್ನಗಿರಿಗೆ ಈಗಾಗಲೇ ಬಿಸಿ ಗಾಳಿಯ ಎಚ್ಚರಿಕೆ ಸಂದೇಶ ಇಲಾಖೆಯಿಂದ ರವಾನೆಯಾಗಿದೆ.

"ಬಿಸಿ ಗಾಳಿ ಕೇವಲ ಮಾನವ ಆರೋಗ್ಯದ ಮೇಲೆ ಮಾತ್ರ ಪ್ರಭಾವ ಬೀರುವುದಲ್ಲದೇ ಬೆಳೆ ಅಭಿವೃದ್ಧಿ ಕುಂಠಿತವಾಗಲು, ಅಂತರ್ಜಲ ಸಂಪನ್ಮೂಲ ಕುಸಿಯಲು ಕೂಡಾ ಕಾರಣವಾಗುತ್ತದೆ. ಏಕೆಂದರೆ ತಂಪಾಗಿಸುವಿಕೆಗಾಗಿ ನೀರಿನ ಅಗತ್ಯ ಹೆಚ್ಚುತ್ತದೆ. ಸರಾಸರಿಗಿಂತ ಅಧಿಕ ಉಷ್ಣಾಂಶವು ಚಳಿಗಾಲದ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಗೋಧಿ ಸೇರಿದಂತೆ ಹಲವು ಬೆಳೆಗಳ ಇಳುವರಿ ಕುಸಿತವಾಗಲಿದೆ ಎಂದು ಎಚ್ಚರಿಸಿದೆ. ಗೋಧಿ ಕಾಳುಗಟ್ಟುವ ಹಂತದಲ್ಲಿ ಮತ್ತು ಕೊಯ್ಲು ಹಂತದಲ್ಲಿ ಉಷ್ಣಾಂಶ ಅಧಿಕವಾದರೆ, ಇಳುವರಿ ಮೇಲೆ ಪರಿಣಾಮ ಉಂಟಾಗುತ್ತದೆ" ಎಂದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ.ಆರ್.ನಾಗೇಶ್ ಅಭಿಪ್ರಾಯಪಟ್ಟಿದ್ದಾರೆ.

ಉತ್ಪಾದಕತೆ ನಷ್ಟವಾಗುವ ಅಪಾಯ ಇದ್ದು, ಈಗಾಗಲೇ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ರೈತರ ಪಾಲಿಗೆ ಈ ಬೇಸಿಗೆ ಮಾರಕವಾಗಲಿದೆ.
ಕೇರಳ, ತಮಿಳುನಾಡು, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ರಾಯಲ ಸೀಮಾ ಪ್ರದೇಶದಲ್ಲಿ ಸರಾಸರಿಗಿಂತ 0.5 ಡಿಗ್ರಿ ಉಷ್ಣಾಂಶ ಹೆಚ್ಚಳವಾಗುವ ಸಾಧ್ಯತೆ ಇದೆ. ಆದರೆ ಜಮ್ಮು ಕಾಶ್ಮೀರ, ಪಂಜಾಬ್, ಹರ್ಯಾಣ, ಛತ್ತೀಸ್‌ಗಢ, ದಿಲ್ಲಿ, ಹಿಮಾಚಲ ಪ್ರದೇಶ, ಪೂರ್ವ ಮತ್ತು ಪಶ್ಚಿಮ ರಾಜಸ್ಥಾನ, ಉತ್ತರಾಖಂಡ, ಪಶ್ಚಿಮ ಮತ್ತು ಪೂರ್ವ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ವಿದರ್ಭ, ಗುಜರಾತ್ ಮತ್ತು ಆಂಧ್ರಪ್ರದೇಶದಲ್ಲಿ ಸರಾಸರಿಗಿಂತ ಒಂದು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚುವ ಸಾಧ್ಯತೆ ಇದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News