ಮೋದಿ ಪದವೀಧರರಾದ ವರ್ಷದ ಪರೀಕ್ಷಾ ದಾಖಲೆ ಬಹಿರಂಗಪಡಿಸಲು ಸಾಧ್ಯವಿಲ್ಲ

Update: 2018-03-01 10:33 GMT

ಹೊಸದಿಲ್ಲಿ, ಮಾ.1: ಪ್ರಧಾನಿ ನರೇಂದ್ರ ಮೋದಿ ಅವರು ಪದವಿ ಪಡೆದಿದ್ದಾರೆ ಎನ್ನಲಾದ ವರ್ಷದ ಅಂದರೆ 1978ರ ಬಿಎ ಪದವಿ ವಿದ್ಯಾರ್ಥಿಗಳ ಪರೀಕ್ಷಾ ದಾಖಲೆಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ವಿವಿ ದಿಲ್ಲಿ ಹೈಕೋರ್ಟ್‍ಗೆ ತಿಳಿಸುವ ಮೂಲಕ ಮೋದಿ ಶೈಕ್ಷಣಿಕ ದಾಖಲೆ ವಿವಾದ ಹೊಸ ತಿರುವು ಪಡೆದುಕೊಂಡಿದೆ.

ಈ ದಾಖಲೆಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದು, ಮಾಹಿತಿ ಹಕ್ಕು ಕಾಯ್ದೆ ಅನ್ವಯ ಇದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅಫಿದಾವಿತ್ ನಲ್ಲಿ ಸ್ಪಷ್ಟಪಡಿಸಿದೆ. ಆದರೆ ನ್ಯಾಯಾಲಯ ಈ ಅಫಿದಾವಿತ್ ಅನ್ನು ದಾಖಲೆಯಾಗಿ ಪರಿಗಣಿಸಿಲ್ಲ. ಏಕೆಂದರೆ, ಈ ವಿಷಯದ ಬಗ್ಗೆ ಹೆಚ್ಚಿನ ಸ್ಪಷ್ಟನೆಗಳನ್ನು ಸಲ್ಲಿಸುವ ವಿಶ್ವವಿದ್ಯಾನಿಲಯದ ಹಕ್ಕನ್ನು ನ್ಯಾಯಾಲಯ ಈಗಾಗಲೇ ಇತ್ಯರ್ಥಪಡಿಸಿದೆ.

1978ರ ಬಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ದಾಖಲೆಯನ್ನು ವೀಕ್ಷಿಸಲು ಅನುಮತಿ ನೀಡುವಂತೆ  ಸೂಚಿಸಿ ಕೇಂದ್ರೀಯ ಮಾಹಿತಿ ಆಯೋಗ ಸಲ್ಲಿಸಿದ್ದ ನಿರ್ದೇಶನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಿದಾವಿತ್ ಸಲ್ಲಿಸಲಾಗಿದೆ.

ಇದು ಮೂರನೇ ವ್ಯಕ್ತಿಯ ವೈಯಕ್ತಿಕ ಮಾಹಿತಿಯಾಗಿದ್ದು, ಇದನ್ನು ಪಡೆಯಲು ಯಾವ ಅವಕಾಶವೂ ಇಲ್ಲ ಕಾನೂನುಬದ್ಧತೆಯೂ ಇಲ್ಲ ಎಂಬ ವಿಶ್ವವಿದ್ಯಾನಿಲಯದ ಮಾಹಿತಿ ಅಧಿಕಾರಿಯ ವಾದವನ್ನು ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯಲು ತಳ್ಳಿಹಾಕಿ, ಮಾಹಿತಿ ವೀಕ್ಷಣೆಗೆ ಅನುವು ಮಾಡಿಕೊಡುವಂತೆ ನಿರ್ದೇಶನ ನೀಡಿದ್ದರು.

ಪ್ರಕರಣದಲ್ಲಿ ಯಾವುದೇ ಸ್ಪಷ್ಟನೆಗಳನ್ನು ಸಲ್ಲಿಸಲು ಅವಕಾಶ ಮುಕ್ತಾಯಗೊಳಿಸಿ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯ ಮೊದಲು ಈ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ರಾಜೀವ್ ಶಖ್ದರ್ ಸ್ಪಷ್ಟಪಡಿಸಿದರು.

ಹಿನ್ನೆಲೆ: ಪ್ರಧಾನಿ ನರೇಂದ್ರ ಮೋದಿ ತಮ್ಮ ಪದವಿ ಪಡೆದ ವರ್ಷವೆಂದು ಹೇಳಲಾಗುತ್ತಿರುವ 1978ರಲ್ಲಿ ದಿಲ್ಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಹಸ್ತಕ್ಷೇಪ ನಡೆಸುವ ಅಧಿಕಾರವನ್ನು ದಿಲ್ಲಿ ಹೈಕೋರ್ಟ್ ನೀಡಿತ್ತು.

ದಿಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರು ನ್ಯಾಷನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್‍ಫಾಮೇರ್ಶನ್ ಕಾರ್ಯಕರ್ತರಾದ ಅಂಜಲಿ ಭಾರದ್ವಾಜ್, ನಿಖಿಲ್ ಡೇ ಅವರ ಮನವಿಗೆ ವ್ಯಕ್ತಪಡಿಸಿದ ತೀವ್ರ ವಿರೋಧದ ಹೊರತಾಗಿಯೂ ಜಸ್ಟಿಸ್ ರಾಜೀವ್ ಶಕ್ದರ್ ಅವರು ಆರ್ ಟಿಐ ಕಾರ್ಯಕರ್ತರ ಪರವಾಗಿ ಆದೇಶ ನೀಡಿದ್ದಾರೆ.

ಈ ಪ್ರಕರಣದಲ್ಲಿ ಆರ್ ಟಿಐ ಕಾರ್ಯಕರ್ತರ ಹಸ್ತಕ್ಷೇಪ ಅನುಮತಿಸಬಾರದು ಎಂದು ಮೆಹ್ತಾ ವಾದಿಸಿದರೆ ಇದೊಂದು ಸಾರ್ವಜನಿಕ ಮಹತ್ವದ ವಿಚಾರವಾಗಿರುವುದರಿಂದ ತಮ್ಮ ಮನವಿಯನ್ನು ಪುರಸ್ಕರಿಸಬೇಕು ಎಂದು ಅಪೀಲುದಾರರ ವಕೀಲರು ಕೋರಿಕೊಂಡಿದ್ದರು.

1978ರಲ್ಲಿ ವಿವಿಯಿಂದ ಬಿಎ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳ ಹೆಸರು ಬಹಿರಂಗ ಪಡಿಸುವಂತೆ ಮುಖ್ಯ ಮಾಹಿತಿ ಆಯುಕ್ತರು 2016ರಲ್ಲಿ  ದಿಲ್ಲಿ ವಿಶ್ವವಿದ್ಯಾಲಯಕ್ಕೆ ನೀಡಿದ್ದ ಆದೇಶವನ್ನು ವಿಶ್ವವಿದ್ಯಾಲಯ ಪ್ರಶ್ನಿಸಿರುವುದು ಸರಿಯಲ್ಲ ಎಂಬುದು ಆರ್ ಟಿಐ ಕಾರ್ಯಕರ್ತರ ವಾದವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News